ರಂಗ ನಿರ್ದೇಶಕ ಚಿದಂಬರರಾವ್ ಜಂಬೆಗೆ ಪುರಸ್ಕಾರ; ಸಾಗರಕ್ಕೊಂದು ʼಕರ್ನಾಟಕ ರಾಜ್ಯೋತ್ಸವʼ ಪ್ರಶಸ್ತಿಯ ಗರಿ

Update: 2023-10-31 14:00 GMT

ಚಿದಂಬರರಾವ್ ಜಂಬೆ

ಸಾಗರ: ರಾಜ್ಯದ ಎರಡನೇ ಸಾಂಸ್ಕೃತಿಕ ನಗರಿ ಎನಿಸಿಕೊಂಡಿರುವ ಸಾಗರಕ್ಕೆ ಈ ಬಾರಿ ರಂಗಭೂಮಿಗೆ ನೀಡುವ ರಾಜ್ಯೋತ್ಸವ ಪ್ರಶಸ್ತಿಯ ಗರಿಯೊಂದು ದೊರಕಿದೆ. ಈ ಪ್ರಶಸ್ತಿಗೆ ನಾಡಿನ ಹೆಸರಾಂತ ರಂಗ ನಿರ್ದೇಶಕ ಚಿದಂಬರರಾವ್ ಜಂಬೆ ಭಾಜನರಾಗಿದ್ದಾರೆ.

ಜಂಬೆ ತಾಲೂಕಿನ ಅಡ್ಡೇರಿ ಗ್ರಾಮದವರು. ಇಲ್ಲಿನ ಕೆಳದಿಯ ಭಾರತಿ ಕಲಾವಿದರು ಸಂಸ್ಥೆಯ ಸಂಗ್ಯಾ ಬಾಳ್ಯಾ ನಾಟಕದ ಮೂಲಕ ರಂಗಭೂಮಿಯನ್ನು ಪ್ರವೇಶಿಸಿದವರು. ನಂತರ ಅವಕಾಶಗಳನ್ನರಸಿ ಬೆಂಗಳೂರು ಸೇರಿ ಅಲ್ಲಿಂದ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ರಂಗಭೂಮಿಯ ನಿರ್ದೇಶನದಲ್ಲಿ ಪದವಿ ಪಡೆದರು. ಪ್ರಪಂಚದ ಗ್ರಾಮೀಣ ರಂಗಭೂಮಿ ಎಂಬ ಖ್ಯಾತಿಯ ನೀನಾಸಮ್ ಹೆಗ್ಗೋಡು ರೂವಾರಿ ಕೆ.ವಿ. ಸುಬ್ಬಣ್ಣವರ ಆಣತಿಯ ಮೇರೆಗೆ ನೀನಾಸಮ್ ರಂಗಶಿಕ್ಷಣ ಕೇಂದ್ರದ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದರು. ನಂತರ ಮೈಸೂರಿನ ರಂಗಾಯಣದ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ನಿವೃತ್ತರಾದ ನಂತರ ಸ್ವಂತಂತ್ರ ನಿರ್ದೇಶಕರಾಗಿ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ, ಭೂಪಾಲ್, ತ್ರಿಷೂರ್ ಹೀಗೆ ದೇಶಾದ್ಯಂತ ಅನೇಕ ರಂಗ ಶಾಲೆಗಳಲ್ಲಿ ಅತಿಥಿ ಉಪನ್ಯಾಸಕರಾಗಿ, ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಸಾಗರದಲ್ಲಿ ಲಾಲ್ ಬಹದ್ದೂರ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಜಿ.ಎಸ್. ಭಟ್ ಅವರ ಗ್ಲಾನಿ ನಾಟಕವನ್ನು ಸಾಗರದಲ್ಲಿ ಉದಯ ಕಲಾವಿದರ ಆಶ್ರಯದಲ್ಲಿ ನಿರ್ದೇಶಿಸುತ್ತಿದ್ದಾರೆ.

ಬಿ.ವಿ. ಕಾರಂತರ ಅತ್ಯಂತ ಆಪ್ತ ಶಿಷ್ಯರಲ್ಲೊಬ್ಬರಾದ ಜಂಬೆ ಅವರ ಗರಡಿಯಲ್ಲಿ ಪಳಗಿದವರು. ನೀನಾಸಮ್ ರಂಗ ಶಿಕ್ಷಣ ಕೇಂದ್ರದ ಹಿರಿಯ ವಿದ್ಯಾರ್ಥಿಗಳಿಂದ ರಂಗಭೂಮಿಯ ದ್ರೋಣಾಚಾರ್ಯ ಎಂದೇ ಕರೆಸಿಕೊಳ್ಳುತ್ತಿರುವ ಇವರು ನೀನಾಸಮ್ ತಿರುಗಾಟಕ್ಕೆ ಚಿರೇಬಂದಿವಾಡೆ, ಮೂವರು ಅಕ್ಕತಂಗಿಯರು, ಚಾಣಕ್ಯ ಪ್ರಪಂಚ, ಪುಂಟಿಲಾ, ಭಾಸಭಾರತ ತಲೆದಂಡ ಮುಂತಾದ ಅನೇಕ ನಾಟಕಗಳನ್ನು ನಿರ್ದೇಶಿಸುವ ಮೂಲಕ ತಿರುಗಾಟಕ್ಕೊಂದು ಘನತೆ ತಂದುಕೊಟ್ಟವರು. ಯಕ್ಷಗಾನವನ್ನು ಬಹುವಾಗಿ ಮೆಚ್ಚಿಕೊಂಡಿರುವ ಇವರ ಯಕ್ಷಗಾನದಲ್ಲಿನ ಸಾಧ್ಯತೆಗಳನ್ನು ನಾಟಕಗಳಲ್ಲಿ ಸಮರ್ಥವಾಗಿ ಬಳಸಿಕೊಂಡವರು.

ಈ ಬಗ್ಗೆ ಪ್ರತಿಕ್ರಿಯಿಸಿದ ಚಿದಂಬರರಾವ್ ಜಂಬೆ,  ʼʼಕನ್ನಡ ರಾಜ್ಯೋತ್ಸವ ಪ್ರಶಸ್ತಿ ಅಂದರೆ ಕನ್ನಡದ ನೆಲ ಜಲ ಭಾಷೆ ಮತ್ತು ಸಂಸ್ಕೃತಿಯ ಪ್ರಶಸ್ತಿ ಎಂದು ಭಾವಿಸುತ್ತೇನೆ. ಕನ್ನಡದ ಮನಸ್ಸುಗಳನ್ನು ಒಂದಾಗಿಸಿದ ಮಹಾ ಪರಂಪರೆಯ ಪೂರ್ವ ಸೂರಿಗಳನ್ನು ವಿನಯದಿಂದ ಸ್ಮರಿಸುತ್ತೇನೆ. ಈ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಇಂಥ ಗೌರವವನ್ನು ಸ್ವೀಕರಿಸಲು ಹೆಮ್ಮೆ ಮತ್ತು ಸಂತೋಷವಾಗುತ್ತಿದೆ. ಈ ಪ್ರಶಸ್ತಿಗೆ ಕಾರಣರಾದ ನನ್ನೊಂದಿಗೆ ರಂಗ ಕಾಯಕದಲ್ಲಿ ಭಾಗಿಗಳಾದ, ಒಡನಾಡಿಗಳಾದ ಸಮಸ್ತ ಗೆಳೆಯ, ಗೆಳತಿಯರನ್ನ ಸ್ಮರಿಸುತ್ತೇನೆ. ಇದರ ಶ್ರೇಯಸ್ಸು ಸಹೃದಯರಿಗೇ ಸಲ್ಲುವಂಥದ್ದುʼʼ ಎಂದು ಹೇಳಿದರು. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News