ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ವಿಧಾನಸಭೆ ಉಪ ಚುನಾವಣೆಯ ಮತ ಎಣಿಕೆ ಆರಂಭ
ಬೆಂಗಳೂರು: ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ನ.13ರಂದು ನಡೆದ ಉಪ ಚುನಾವಣೆಯ ಮತಗಳ ಎಣಿಕೆ ಕಾರ್ಯವು ಬೆಳಿಗ್ಗೆ 8.00 ಗಂಟೆಗೆ ಆರಂಭಗೊಂಡಿದೆ.
ಶಿಗ್ಗಾಂವಿ ವಿಧಾನಸಭೆ ಉಪ ಚುನಾವಣೆಯ ಮತ ಎಣಿಕೆ ದೇವಗಿರಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯು ರಾಮನಗರ ಜಿಲ್ಲೆಯ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರದ ಮತಗಳ ಎಣಿಕೆಯು ಬಳ್ಳಾರಿ ಜಿಲ್ಲೆಯ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯುತ್ತಿದೆ.
ಅಂಚೆ ಮತ ಪತ್ರ, ಸೇವಾ ಮತದಾರರ ಮತಪತ್ರ ಎಣಿಕೆ ಸಹಿತ ಇವಿಎಂ ಮತಗಳ ಎಣಿಕೆಗೆ 14 ಟೇಬಲ್ ಅಳವಡಿಸಲಾಗಿದ್ದು, ಪ್ರತಿ ಟೇಬಲ್‌ಗೆ ಒಬ್ಬರು ಎಣಿಕೆ ಮೇಲ್ವಿಚಾರಕರು, ಒಬ್ಬರು ಎಣಿಕೆ ಸಹಾಯಕರು ಹಾಗೂ ಒಬ್ಬರು ಮೈಕ್ರೋ ಅಬ್ಸರ್ವರ್ ರನ್ನು ನೇಮಕಗೊಳಿಸಲಾಗಿದೆ.
ಎಣಿಕೆ ಕೇಂದ್ರದ 200ಮೀ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿ ಮಾಡಲಾಗಿದ್ದು, ಬಂದೋಬಸ್ತ್ ಗಾಗಿ ಪೊಲೀಸ್ ಇಲಾಖೆಯಿಂದ 4 ಡಿ.ಎಸ್.ಪಿ, 9 ಸಿ.ಪಿ.ಐ, 25 ಪಿ.ಎಸ್.ಐ, 29 ಎ.ಎಸ್.ಐ, 250 ಹೆಚ್.ಸಿ/ಪಿ.ಸಿ ಹಾಗೂ 2 ಕೆ.ಎಸ್.ಆರ್.ಪಿ.ಯ ತುಕಡಿಗಳನ್ನು ಮತ್ತು ಡಿ.ಆರ್. 4 ತುಕಡಿಗಳನ್ನು ನಿಯೋಜಿಸಲಾಗಿದೆ.
ಶಿಗ್ಗಾಂವಿ ವಿಧಾನಸಭೆ ಉಪ ಚುನಾವಣೆಯಲ್ಲಿ ಶೇ.80.48 ರಷ್ಟು ಮತದಾನ ನಡೆದಿದ್ದು, 1,91,166 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.