ಮುನಿರತ್ನ ವಿರುದ್ಧ ಚಾರ್ಜ್‌​ಶೀಟ್ ಸಲ್ಲಿಕೆ; ಬಿಜೆಪಿ ಶಾಸಕನ HIV ಹನಿಟ್ರ್ಯಾಪ್ ಕೃತ್ಯ ನಿಜವೆಂದ ಎಸ್ಐಟಿ..!

Update: 2024-12-28 16:51 GMT

ಮುನಿರತ್ನ

ಬೆಂಗಳೂರು : ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಎಚ್‍ಐವಿ ಪೀಡಿತರ ಮೂಲಕ ಹನಿಟ್ರ್ಯಾಪ್ ಮಾಡಿಸಿದ ಕೃತ್ಯ ನಿಜವೆಂದು ವಿಶೇಷ ತನಿಖಾ ತಂಡ (ಎಸ್‍ಐಟಿ) ಚಾರ್ಜ್ ಶೀಟ್‍ನಲ್ಲಿ ಉಲ್ಲೇಖಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

42ನೆ ಎಸಿಜೆಎಂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವಿಶೇಷ ತನಿಖಾ ತಂಡ (ಎಸ್‍ಐಟಿ) ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಹನಿಟ್ರ್ಯಾಪ್ ಆರೋಪ ತನಿಖೆಯಲ್ಲಿ ರಜುವಾತಾಗಿದೆ ಎಂದು ಉಲ್ಲೇಖಿಸಿದೆ.

ಅದರಲ್ಲೂ, ತಮ್ಮ ವಿರೋಧಿಗಳನ್ನು ಎಚ್‍ಐವಿ ಪೀಡಿತರ ಮೂಲಕ ಹನಿಟ್ರ್ಯಾಪ್ ಬಲಗೆ ಬೀಳಿಸಿ ಏಡ್ಸ್ ಹರಡುವಿಕೆಗೆ ಶಾಸಕ ಮುನಿರತ್ನ ದುಷ್ಕೃತ್ಯ ಎಸಗಿದ್ದರು ಎಂದು ಎಸ್‍ಐಟಿ ಸಲ್ಲಿಸಿದ ಚಾರ್ಜ್‍ಶೀಟ್‍ನಲ್ಲಿ ಹೇಳಲಾಗಿದೆ.ಇದು ಐಪಿಸಿ 270ರ ಅಡಿ(ಅಪಾಯಕಾರಿ ರೋಗ ಹರಡುವಿಕೆ) ಕೃತ್ಯವೆಂದು ತಿಳಿಸಲಾಗಿದೆ.

ಮುನಿರತ್ನ ಹಾಗೂ ಮೂವರು ಸಹಚರರ ವಿರುದ್ಧ ಒಟ್ಟು 2481 ಪುಟಗಳ ಆರೋಪ ಪಟ್ಟಿಯನ್ನು ಎಸ್‍ಐಟಿ ಸಲ್ಲಿಸಿದೆ. ಇದರಲ್ಲಿ 146 ಸಾಕ್ಷಿಗಳ ಹೇಳಿಕೆ, 350 ದಾಖಲೆಗಳು ಸಲ್ಲಿಕೆಯಾಗಿವೆ. ಅಲ್ಲದೆ ನ್ಯಾಯಾಧೀಶರ ಮುಂದೆ ಸಿಆರ್‍ಪಿಸಿ 164 ರಡಿ ದೂರುದಾರೆ ಸೇರಿ 8 ಮಂದಿ ಹೇಳಿಕೆ ನೀಡಿದ್ದು, ವೈದ್ಯಕೀಯ, ಎಫ್‍ಎಸ್‍ಎಲ್ ವರದಿಯಗಳನ್ನು ಕೂಡ ಆರೋಪಪಟ್ಟಿಯಲ್ಲಿ ಲಗತ್ತಿಸಲಾಗಿದೆ ಎಂದು ತಿಳಿದುಬಂದಿದೆ.

ಏನಿದು ಪ್ರಕರಣ?: ಜೆ.ಪಿ.ನಗರ ವಾರ್ಡ್ ಮಾಜಿ ಸದಸ್ಯೆ ಪತಿಗೆ ಏಡ್ಸ್ ರೋಗ ಹರಡಲು ಏಡ್ಸ್ ಸಂತ್ರಸ್ತೆಯನ್ನು ಹನಿಟ್ರ್ಯಾಪ್‍ಗೆ ಬಳಸಿಕೊಂಡಿದ್ದರು ಎಂದು ಆರೋಪಿಸಿ ಸೆ.18 ರಂದು ರಾಮನಗರ ಜಿಲ್ಲೆಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಕಾರ್ಯಕರ್ತೆ ದೂರು ನೀಡಿದ್ದರು. ಪ್ರಕರಣದಲ್ಲಿ ಶಾಸಕರನ್ನು ರಾಮನಗರ ಪೊಲೀಸರು ಬಂಧಿಸಿದ್ದರು. ಬಳಿಕ ಮುನಿರತ್ನ ವಿರುದ್ಧ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರಕಾರವು, ಈ ಬಗ್ಗೆ ತನಿಖೆಗೆ ಎಸ್‍ಐಟಿ ರಚಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News