ಸಿ.ಟಿ.ರವಿ ಅವರೇ, ಪೆಟ್ಟಾಗಿದ್ದು ನಿಮ್ಮ ತಲೆಗಲ್ಲ, ಮೆದುಳಿಗೆ : ಪ್ರಿಯಾಂಕ್ ಖರ್ಗೆ
ಬೆಂಗಳೂರು : "ಪ್ರಜಾಪ್ರಭುತ್ವದ ದೇಗುಲದಲ್ಲಿ ನಿಂತು ಮಹಿಳಾ ಸಮುದಾಯವನ್ನು ಅವಮಾನಿಸಿದವರ ಬಾಯಲ್ಲಿ ಸರ್ವಜ್ಞನ ವಚನ ಕೇಳುವುದು, ಭೂತದ ಬಾಯಲ್ಲಿ ಭಾಗವದ್ಗೀತೆ ಕೇಳಿದಂತೆಯೇ ಸರಿ" ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಿ.ಟಿ.ರವಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಬೀದರ್‌ನಲ್ಲಿ ಯುವ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಟಿ.ರವಿ ಅವರು ಆಡಿರುವ ಮಾತುಗಳಿಗೆ ತಿರುಗೇಟು ನೀಡಿರುವ ಸಚಿವರು, "ಸಿ.ಟಿ.ರವಿ ಅವರೇ, ಪೆಟ್ಟಾಗಿದ್ದು ನಿಮ್ಮ ತಲೆಗಲ್ಲ, ಮೆದುಳಿಗೆ. ಮೆದುಳಿಗಾಗಿರುವ ಪೆಟ್ಟಿಗೆ ಬ್ಯಾಂಡೇಜ್ ಪರಿಹಾರವಲ್ಲ, ಮಾನಸಿಕ ಚಿಕಿತ್ಸೆಯೇ ಪರಿಹಾರ. ನನ್ನ ರಾಜೀನಾಮೆ ಕೇಳುವುದು ಬಿಜೆಪಿಗರ ನಿತ್ಯಮಂತ್ರವಾಗಿದೆ, ಬಹುಶಃ ನಿದ್ದೆಯ ಕನವರಿಕೆಯಲ್ಲೂ “ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡಬೇಕು” ಎಂದು ಕೂಗುತ್ತಿರುತ್ತಾರೋ ಏನೋ" ಎಂದು ವ್ಯಂಗ್ಯವಾಡಿದ್ದಾರೆ.
"ನನಗೆ ಸಂಬಂಧವೇ ಇಲ್ಲದ ಪ್ರಕರಣವನ್ನು ಇಟ್ಟುಕೊಂಡು ಬಾಯಿಗೆ ಬಂದಂತೆ ಮಾತನಾಡುವ ಬಿಜೆಪಿ ನಾಯಕರು ಉತ್ತರಿಸಲಿ, ಆಪ್ತನಿಗೆ ಸಂಬಂಧಿಸಿದ ಪ್ರಕರಣಕ್ಕೆ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡಬೇಕು ಎನ್ನುವ ಬಿಜೆಪಿಯವರೇ, ಅಪ್ಪನಿಂದಾದ ಪೊಕ್ಸೋ ದೌರ್ಜನ್ಯಕ್ಕೆ ವಿಜಯೇಂದ್ರ ರಾಜೀನಾಮೆ ಕೊಡಬೇಕು ಎಂದು ಕೇಳುತ್ತಿಲ್ಲವೇಕೆ?. ದಲಿತರನ್ನು ನಿಂದಿಸಿ, ಒಕ್ಕಲಿಗ ಮಹಿಳೆಯರನ್ನು ಮಂಚಕ್ಕೆ ಕರೆದ ಮುನಿರತ್ಮರ ಕೃತ್ಯಕ್ಕೆ ಸಾಕ್ಷಿ ದೊರಕಿದ್ದರೂ ಕ್ರಮ ಕೈಗೊಳ್ಳಲಿಲ್ಲ ಏಕೆ?" ಎಂದು ಪ್ರಶ್ನಿಸಿದ್ದಾರೆ.