ಬಿಜೆಪಿ ಅವಧಿಯ ಸಾಲದ ಹೊರೆ ಸಾರಿಗೆ ಸಂಸ್ಥೆಗಳಿಗೆ ಶಾಪವಾಗಿದೆ : ಕಾಂಗ್ರೆಸ್ ಟೀಕೆ
ಬೆಂಗಳೂರು: ‘ಸಾರಿಗೆ ನೌಕರರ ಹಿತಕಾಯುವಲ್ಲಿ ನಾವು ಬದ್ಧತೆ ಹೊಂದಿದ್ದೇವೆ. ತಮ್ಮ ಅವಧಿಯ ಸಾಲದ ಹೊರೆಯಿಂದ ಹೊರಬರಲು ಶತ ಪ್ರಯತ್ನ ಮಾಡುತ್ತಿದ್ದೇವೆ. ನಿಮ್ಮ(ಬಿಜೆಪಿ) ಆಡಳಿತದ ಅವಧಿಯೇ ಸಾರಿಗೆ ಸಂಸ್ಥೆಗಳಿಗೆ ದುರಂತ, ಶಾಪವಾಗಿ ಪರಿಣಮಿಸಿದೆ’ ಎಂದು ಕಾಂಗ್ರೆಸ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.
ಶನಿವಾರ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ‘ಬಿಜೆಪಿಯವರು ಮೂರ್ಖರು, ಲಾಭಕ್ಕೂ ಆದಾಯಕ್ಕೂ ವ್ಯತ್ಯಾಸ ತಿಳಿಯದ ದಡ್ಡ ಶಿಖಾಮಣಿಗಳು ಎಂಬುದನ್ನು ಪ್ರತಿ ಬಾರಿ ದಾಖಲೆ ಸಮೇತ ರುಜುವಾತು ಮಾಡುತ್ತಿರುತ್ತಾರೆ. ನಾವು ಅಂಕಿ-ಅಂಶಗಳ ಮೂಲಕ ಮಾಹಿತಿ ಒದಗಿಸಿ ಇವರ ಸುಳ್ಳನ್ನು ಬಯಲಿಗೆಳೆದರೂ ಇವರು ಸುಧಾರಣೆ ಹೊಂದುವ ಯಾವುದೇ ಸಣ್ಣ ಕುರುಹು ಕಾಣದಿರುವುದು ವಿಷಾದನೀಯ ಎಂದು ಲೇವಡಿ ಮಾಡಿದೆ.
‘ಬಿಜೆಪಿ ಅವಧಿಯ ಆಡಳಿತದಲ್ಲಿ ಸಾರಿಗೆ ನೌಕರರಿಗೆ ಒಳ್ಳೆಯದನ್ನು ಮಾಡುವ ಯಾವುದೇ ನೀತಿ, ಕಾರ್ಯಕ್ರಮ ಅನುಷ್ಠಾನಗೊಳಿಸದೆ, 15 ದಿವಸ ಸಾರಿಗೆ ಮುಷ್ಕರ ಆಗಲು ಕಾರಣರಾದ ನೀವು ಇಂದು ಪತ್ರಿಕಾಗೋಷ್ಠಿ ನಡೆಸಿ ಅವರ ಪರವಾಗಿ ಮಾತನಾಡುವ ಯಾವ ನೈತಿಕತೆ ನಿಮಗಿದೆ. ಇವತ್ತಿನ ಸಾರಿಗೆ ಸಂಸ್ಥೆಗಳ ಅಧೋಗತಿಗೆ ಬಿಜೆಪಿ ಕಾರಣ ಅದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ’ ಎಂದು ಕಾಂಗ್ರೆಸ್ ಟೀಕಿಸಿದೆ.
‘ಬಿಜೆಪಿ ಅಧಿಕಾರದಲ್ಲಿದ್ದಾಗ ಸಾರಿಗೆ ನೌಕರರನ್ನು ಕಣ್ಣೀರು ಹಾಕಿಸಿ ಸುಮಾರು 3 ಸಾವಿರ ನೌಕರರನ್ನು ವಜಾ, ಅಮಾನತ್ತುಗೊಳಿಸಿ ನೌಕರರ ಕುಟುಂಬಗಳನ್ನು ಬೀದಿಗೆ ತಂದದ್ದನ್ನು ಮರೆತುಬಿಟ್ಟಿರಾ?, ಇನ್ನು ಅವರು ಕೋರ್ಟ್, ಕಚೇರಿ ಅಲೆದಾಡುತ್ತಿದ್ದಾರೆ. ಈಗ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಮೊಸಳೆ ಕಣ್ಣೀರು ಸುರಿಸುವ ನಿಮಗೆ ನಾಚಿಕೆಯಿಲ್ಲವೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
‘ಬಿಜೆಪಿ ಸರಕಾರ ಬಿಟ್ಟು ಹೋಗಿದ್ದ 5900ಕೋಟಿ ರೂ.ನಷ್ಟದಿಂದ ಹೊಣೆಗಾರಿಕೆ ಬಾಕಿಗಳಾದ ಡೀಸೆಲ್ ಹಣ, ಸಿಬ್ಬಂದಿಗಳ ಭವಿಷ್ಯ ನಿಧಿ, ಖರೀದಿ ಸಾಮಾಗ್ರಿಗಳ ಹಣ ಸೇರಿ ಎಲ್ಲ ಬಾಕಿಗಳನ್ನು ತೀರಿಸುವ ಹೊಣೆಗಾರಿಕೆ ಹೊತ್ತುಕೊಂಡು ನಾವು ಸಂಸ್ಥೆಗಳನ್ನು ಮುನ್ನಡೆಸಬೇಕಾಗಿದೆ. ತಮ್ಮ ಪಕ್ಷ 2023ರ ಮಾರ್ಚ್‍ನಲ್ಲಿ 38 ತಿಂಗಳುಗಳ ನಂತರ ಸಂಬಳ ಏರಿಕೆ ಮಾಡಿ, ಏರಿಕೆಯಾದ ಸಂಬಳದ 38 ತಿಂಗಳ ಅರಿಯರ್ಸ್ ಸಿಬ್ಬಂದಿಗಳಿಗೆ ನೀಡದೆ, ಅದಕ್ಕೆ ಬೇಕಾದ ಅನುದಾನವನ್ನು ನೀಡದೆ, ನಿವೃತ್ತಿ ಹೊಂದಿದ 11,694 ಸಿಬ್ಬಂದಿಗಳಿಗೆ ಉಪಧನ ಮತ್ತು ಗಳಿಕೆ ರಜೆ ಬಾಕಿ ಹಣವನ್ನು ನೀಡದೆ ನಾವು ಕಳೆದ ವಾರ 224 ಕೋಟಿ ರೂ.ಪಾವತಿಸಿದ್ದೇವೆ ಎಂದು ಕಾಂಗ್ರೆಸ್ ವಿವರಿಸಿದೆ.
‘ಶಕ್ತಿ’ ಯೋಜನೆಗೆ ಸಂಬಂಧಪಟ್ಟಂತೆ ಸರಕಾರವು ಕೆಎಸ್ಸಾರ್ಟಿಸಿಗೆ- 2,481 ಕೋಟಿ ರೂ., ಬಿಎಂಟಿಸಿಗೆ- 1,126 ಕೋಟಿ ರೂ., ವಾಯುವ್ಯ ಸಾರಿಗೆಗೆ-1,613 ಕೋಟಿ ರೂ., ಕಲ್ಯಾಣ ಕರ್ನಾಟಕ ಸಾರಿಗೆಗೆ-1,321 ಕೋಟಿ ರೂ.ಅನುದಾನವು ಸೇರಿ ಒಟ್ಟು ನಾಲ್ಕೂ ಸಾರಿಗೆ ಸಂಸ್ಥೆಗಳಿಗೆ 6,543 ಕೋಟಿ ರೂ. ಅನುದಾನವನ್ನು ಸರಕಾರ 2023ರ ಜೂನ್‍ನಿಂದ 2024ರ ನವೆಂಬರ್ ವರೆಗೆ ಬಿಡುಗಡೆ ಮಾಡಿದೆ ಎಂದು ಕಾಂಗ್ರೆಸ್ ಅಂಕಿ-ಸಂಖ್ಯೆ ನೀಡಿದೆ.
‘ಸಾರಿಗೆ ಸಂಸ್ಥೆಗಳಲ್ಲಿ ಬಿಜೆಪಿ ಬಿಟ್ಟುಹೋಗಿರುವ 5900 ಕೋಟಿ ರೂ.ಸಾಲ, ಭವಿಷ್ಯ ನಿಧಿ ಹಣ ಪಾವತಿ ಬಾಕಿ, ಗ್ರಾಜ್ಯುಟಿ ಹಣ ಬಾಕಿ, ಶೂನ್ಯ ನೇಮಕ, ಶೂನ್ಯ ಹೊಸ ಬಸ್ಸುಗಳ ಸೇರ್ಪಡೆ, ಶೂನ್ಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮತ್ತೊಂದು ಸುದ್ದಿಗೋಷ್ಠಿ ಮಾಡಿ ಚರ್ಚೆಗೆ ಆಹ್ವಾನಿಸಿದರೆ ಮುಖಾಮುಖಿಯಾಗಿ ಮಾತನಾಡೋಣ’ ಎಂದು ಕಾಂಗ್ರೆಸ್, ಬಿಜೆಪಿಗೆ ಸವಾಲು ಹಾಕಿದೆ.