ಮುನಿರತ್ನ ಅಭಿನಯದ ‘ಆ್ಯಸಿಡ್ ಮೊಟ್ಟೆ’ ಸಿನಿಮಾ 100 ದಿನ ಓಡಿಸಿ : ಡಿ.ಕೆ.ಸುರೇಶ್ ವ್ಯಂಗ್ಯ

Update: 2024-12-28 15:06 GMT

ಡಿ.ಕೆ.ಸುರೇಶ್

ಬೆಂಗಳೂರು : ಆ್ಯಸಿಡ್ ಮೊಟ್ಟೆ ದಾಳಿ ಪ್ರಕರಣ ಪೂರ್ವನಿಯೋಜಿತ. ಶಾಸಕ ಮುನಿರತ್ನ ಅಭಿನಯದ ‘ಆ್ಯಸಿಡ್ ಮೊಟ್ಟೆ’ ಸಿನಿಮಾವನ್ನು 100 ದಿನ ಓಡಿಸಿ. ಅದಕ್ಕಾಗಿಯೇ ಒಳ್ಳೆಯ ಅಭಿನಯ ಮಾಡಿದ ವಿಡಿಯೋವನ್ನು ಮಾಧ್ಯಮಗಳ ಕೈಗೆ ನೀಡಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದ್ದಾರೆ.

ಶನಿವಾರ ಇಲ್ಲಿನ ಸದಾಶಿವನಗರ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮುನಿರತ್ನ ಅವರ ಮೊಟ್ಟೆ ಎಸೆತದ ವಿಡಿಯೋ ಪ್ರಕರಣದಲ್ಲಿ ಬಿಜೆಪಿ ಶಾಸಕರು, ನನ್ನ ಮೇಲೆ, ನನ್ನ ಸಹೋದರ ಹಾಗೂ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಕುಸುಮಾ ಹಾಗೂ ಅವರ ತಂದೆ ವಿರುದ್ಧ ನೇರ ಆರೋಪ ಮಾಡಿದ್ದಾರೆ. ಇದೆಲ್ಲವೂ ಶುದ್ಧ ಸುಳ್ಳು ಎಂದರು.

ಈ ವಿಡಿಯೋ ಅತ್ಯುತ್ತಮವಾಗಿ ಮೂಡಿ ಬಂದಿದೆ. ಆ್ಯಸಿಡ್ ದಾಳಿ ಎಂದ ಮೂರು ಸೆಕೆಂಡ್‍ನಲ್ಲಿ ಮೊಟ್ಟೆ ಎಸೆಯಲಾಗಿದೆ. ಕನ್ನಡ ಚಿತ್ರರಂಗದ ಅಧ್ಯಕ್ಷ, ನಿರ್ಮಾಪಕರು, ಚಿತ್ರಕಥೆ ತಿರುಚುವ ಕೆಲಸ ಮಾಡಿದ್ದ ಮುನಿರತ್ನ, ಈಗ ತಾವೇ ನಟನೆಗೂ ಇಳಿದಿದ್ದಾರೆಂದು ಈ ವಿಡಿಯೋ ನೋಡಿದ ಮೇಲೆ ನನಗೆ ತಿಳಿಯಿತು. ಮಾಧ್ಯಮಗಳು ಕೂಡ ಈ ವಿಡಿಯೋವನ್ನು ಚೆನ್ನಾಗಿ ಬಿತ್ತರಿಸಿದ್ದೀರಿ. ಅಭಿನಯ ಮಾಡಿದ ಅವರಿಗೂ ಅಭಿನಂದನೆ, ಅದನ್ನು ತೋರಿಸಿದ ಮಾಧ್ಯಮಗಳಿಗೂ ಅಭಿನಂದನೆಗಳು ಎಂದು ಡಿ.ಕೆ.ಸುರೇಶ್ ಹೇಳಿದರು.

ಮುನಿರತ್ನ ಅವರು ಅನೇಕ ಸಿನೆಮಾ ಮಾಡಿದ್ದು, ಕೆಲವು ಡಬ್ಬಾ ಯಶಸ್ವಿಯಾದರೆ, ಮತ್ತೆ ಕೆಲವು ಯಶಸ್ವಿಯಾಗಿಲ್ಲ. ಹೀಗಾಗಿ ಹೊಸ ಸ್ಕ್ರಿಪ್ಟ್ ಸಿದ್ಧಪಡಿಸುತ್ತಿದ್ದಾರೆ. ಮೊದಲು ಮಾಧ್ಯಮಗಳನ್ನು ಬಳಸಿಕೊಂಡು ಮಾರುಕಟ್ಟೆ ಇದ್ದರೆ ನಂತರ ಸಿನಿಮಾ ಮಾಡಲು ಮುಂದಾಗಿದ್ದಾರೆ ಎಂದು ಡಿ.ಕೆ.ಸುರೇಶ್ ವ್ಯಂಗ್ಯವಾಡಿದರು.

ಈ ಪ್ರಕರಣವನ್ನು ಸಿಬಿಐಗೆ ನೀಡಲಿ. ಅವರು ಗೃಹ ಮಂತ್ರಿಗೆ ಪತ್ರ ಬರೆದು ಎಸ್‍ಪಿಜಿ ಭದ್ರತೆಯನ್ನೇ ಪಡೆಯಲಿ. ಕಾರಣ ಅವರ ಬಳಿ ರಘು ಎಂಬ ಚಾಲಕ ಇದ್ದ. ಅವನು ಏನಾದ ಎಂದು ತಿಳಿಯಬೇಕಲ್ಲವೇ?. ಮತ್ತೊಬ್ಬ ಮಲ್ಲತ್ತಹಳ್ಳಿ ರಂಜಿತ್ ಎಂಬ ಹುಡುಗನ ಕೈಕಾಲು ಮುರಿದಿದ್ದಾರೆ. ಇಷ್ಟು ದಿನ ಅವರ ಖಾಸಗಿ ವಿಚಾರ ಮಾತನಾಡಬಾರದು ಎಂದು ಸುಮ್ಮನಿದ್ದೆ. ಈ ಪ್ರಕರಣಗಳನ್ನು ಸಿಬಿಐ ತನಿಖೆಯಾಗಲಿ ಎಂದು ಅವರೇ ಪತ್ರ ಬರೆಯಲಿ. ಅವರ ಹೈಕಮಾಂಡ್‍ಗೆ ಕೊಟ್ಟಿರುವ ವರದಿಯಲ್ಲಿ ಇದನ್ನು ಸೇರಿಸಲಿ ಎಂದು ಡಿ.ಕೆ.ಸುರೇಶ್ ಸವಾಲು ಹಾಕಿದರು.

ಬಿಜೆಪಿ-ಜೆಡಿಎಸ್‍ನಲ್ಲಿ ಡಿ.ಕೆ.ಸಹೋದರರ ಹೆಸರು ಹೇಳಿದರಷ್ಟೇ ಸಿನಿಮಾ ನಡೆಯುವುದು..!

ನನ್ನನ್ನು ಸೋಲಿಸಿದೆವು ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ನನ್ನನ್ನು ಸೋಲಿಸಿದವರು ಜನರೇ ಹೊರತು ಬಿಜೆಪಿ ನಾಯಕರಲ್ಲ ಎಂದು ಫಲಿತಾಂಶ ಬಂದ ದಿನವೇ ಹೇಳಿದ್ದೇನೆ. ಇವರ ಯೋಗ್ಯತೆಗೆ ನನ್ನ ಸೋಲಿಸಲು ಆಗುವುದಿಲ್ಲ. ಜನ ತೀರ್ಮಾನಿಸಿ ನನ್ನನ್ನು ಸೋಲಿಸಿದ್ದಾರೆ. ಅದನ್ನು ನಾನು ಒಪ್ಪಿದ್ದೇನೆ. ಇವರು ದೊಡ್ಡ ಸಾಧನೆ ಮಾಡಿರುವವರಂತೆ ನನ್ನ ಹೆಸರು ಹೇಳಿಕೊಂಡು ಇವರ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‍ನಲ್ಲಿ ನನ್ನ ಹಾಗೂ ನನ್ನ ಅಣ್ಣನ ಹೆಸರು ಹೇಳಿದರಷ್ಟೇ ಇವರ ಸಿನಿಮಾ ನಡೆಯುತ್ತದೆ ಎಂದು ಡಿ.ಕೆ.ಸುರೇಶ್ ತಿಳಿಸಿದರು.

ಸಿ.ಟಿ.ರವಿಗೆ ತಾಯಿ ನೆನಪಾಗಲಿಲ್ಲವೇ?

ಮುನಿರತ್ನ ಒಕ್ಕಲಿಗರ ಹೆಣ್ಣು ಮಕ್ಕಳ ವಿಚಾರದಲ್ಲಿ ಹೇಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಒಕ್ಕಲಿಗ ಹಾಗೂ ದಲಿತ ಮಹಿಳೆಯರನ್ನು ಮಂಚಕ್ಕೆ ಕರೆದು ಅಪಮಾನ ಮಾಡಿದ್ದಾರೆ. ಆತನ ಅಸಭ್ಯ ವರ್ತನೆಯ ಆಡಿಯೋ ನಿಜ ಎಂದು ಎಫ್‍ಎಸ್‍ಎಲ್ ವರದಿಯಲ್ಲಿ ಸಾಬೀತಾಗಿದೆ. ಹೀಗಾಗಿ ಎಸ್‍ಐಟಿ ಎಫ್‍ಐಆರ್ ದಾಖಲಿಸಿದೆ. ಆತ ಹೇಗೆ ನೀಚವಾಗಿ ನಡೆದುಕೊಂಡಿದ್ದಾನೆ ಎಂಬುದನ್ನು ಮಾಧ್ಯಮಗಳು ಸರಿಯಾಗಿ ಜನರಿಗೆ ತೋರಿಸಬೇಕು. ಇಷ್ಟೆಲ್ಲಾ ಆದರೂ ಸಿ.ಟಿ.ರವಿ ಅವರು ಆತನ ಮನೆಗೆ ಹೋಗಿದ್ದಾರೆ. ಅವರು ತಮ್ಮ ತಾಯಿಯನ್ನು ಮರೆತು ಅವರ ಮನೆಗೆ ಹೋಗಿದ್ದಾರೆ ಎಂದು ಡಿ.ಕೆ.ಸುರೇಶ್ ಖಂಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News