ಸಾರಿಗೆ ಇಲಾಖೆಯನ್ನು ಸಮಾಧಿ ಮಾಡುವ ಮಟ್ಟಕ್ಕೆ ತಂದ ಕಾಂಗ್ರೆಸ್‌ ಸರಕಾರ : ಪಿ.ರಾಜೀವ್

Update: 2024-12-28 12:19 GMT

ಪಿ.ರಾಜೀವ್

ಬೆಂಗಳೂರು : ‘ಸಾರಿಗೆ ಇಲಾಖೆಯನ್ನು ಸಮಾಧಿ ಮಾಡುವ ಮಟ್ಟಕ್ಕೆ ಈ ಸರಕಾರ ತಂದು ನಿಲ್ಲಿಸಿದ್ದು, ಇಲಾಖೆ ನೌಕರರು ನಾಳೆ(ಡಿ.29)ಯಿಂದ ಪ್ರತಿಭಟನೆ ನಡೆಸಲು ಕರೆ ನೀಡಿದ್ದಾರೆ. ಇಲಾಖೆ ನೌಕರರ ಜೊತೆಗೆ ಬಿಜೆಪಿ ನಿಲ್ಲಲಿದೆ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ತಿಳಿಸಿದ್ದಾರೆ.

ಶನಿವಾರ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಚಿವ ರಾಮಲಿಂಗಾರೆಡ್ಡಿ ಇಲಾಖೆ ಲಾಭದಲ್ಲಿದೆ ಎನ್ನುತ್ತಾರೆ. ಸಚಿವರೇ ಇಷ್ಟು ಅಜ್ಞಾನಿಗಳಾದರೆ ಇನ್ನು ಜನಸಾಮಾನ್ಯರ ಪಾಡೇನು? ಇದು ರಾಜ್ಯದ ದುರ್ದೈವ’ ಎಂದು ಲೇವಡಿ ಮಾಡಿದರು.

‘ನಿವೃತ್ತ ಐಎಎಸ್ ಅಧಿಕಾರಿ ಉಪೇಂದ್ರ ತ್ರಿಪಾಠಿ ಬಿಎಂಟಿಸಿಯ ಎಂ.ಡಿ. ಆಗಿದ್ದಾಗ ಆ ಸಂಸ್ಥೆಯನ್ನು ನಷ್ಟದಿಂದ ಲಾಭಕ್ಕೆ ತಂದರು. ಇಲಾಖೆಗೆ ಬಹಳಷ್ಟು ಆಸ್ತಿಯನ್ನೂ ಮಾಡಿದ್ದರು. 700 ಕೋಟಿ ರೂ. ಮೊತ್ತವನ್ನು ಠೇವಣಿ ಇಟ್ಟಿದ್ದರು. ಆದರೆ, ಇದೀಗ ಸರಕಾರ ಸಂಪೂರ್ಣ ದಿವಾಳಿಯಾಗಿದೆ. ಪ್ರಾಮಾಣಿಕ ಅಧಿಕಾರಿಗಳು ಶೇಖರಿಸಿಟ್ಟ ಆಸ್ತಿಯನ್ನು ಮಾರಾಟ ಮಾಡಲು ಈ ಸರಕಾರ ಹೊರಟಿದೆ. ಅಧಿಕಾರಿಗಳು, ಸಿಬ್ಬಂದಿಗೆ ಸಂಬಳ ಕೊಡಲಾಗದೇ ಇರುವುದೇ ಇದಕ್ಕೆ ಕಾರಣ ಎಂದು ಅವರು ವಿಶ್ಲೇಷಿಸಿದರು.

ಡಿಸೆಂಬರ್ ಅಂತ್ಯಕ್ಕೆ ಅಂದರೆ ಇಂದಿನ ವರೆಗೆ ಸಾರಿಗೆ ಇಲಾಖೆಗೆ ಸರಕಾರ 7,401ಕೋಟಿ ರೂ. ಕೊಡಬೇಕಿದೆ. ಭವಿಷ್ಯನಿಧಿ ನ್ಯಾಸ ಮಂಡಳಿಗೆ 2,500ಕೋಟಿ ರೂ., ನಿವೃತ್ತ ನೌಕರರ ಬಾಕಿ 362ಕೋಟಿ ರೂ., ಸಿಬ್ಬಂದಿಗಳ ಬಾಕಿ ಪಾವತಿ, ಸರಬರಾಜುದಾರರ ಬಿಲ್ ಪಾವತಿ, ಇಂಧನ ಬಾಕಿ ಸೇರಿ 1ಸಾವಿರ ಕೋಟಿ ರೂ., ಎಂವಿಸಿ ಕ್ಲೈಮ್‍ಗಳು, ಇತರ ಬಿಲ್‍ಗಳು, ನಿವೃತ್ತ ನೌಕರರ ಪರಿಷ್ಕೃತ ಉಪಧನ, ರಜೆ ನಗದೀಕರಣ-700 ಕೋಟಿ ರೂ., ಒಟ್ಟು ಸಾಲದ ಬಾಕಿ ಹೊಣೆಗಾರಿಕೆ ಸೇರಿದಾಗ 5,614ಕೋಟಿ ರೂ. ಆಗುತ್ತದೆ ಎಂದು ಪಿ.ರಾಜೀವ್ ವಿವರ ನೀಡಿದರು.

‘ಶಕ್ತಿ ಯೋಜನೆಯಡಿ 2023-24ನೇ ಸಾಲಿನ ಬಾಕಿ 1180 ಕೋಟಿ ರೂ.ಗಳಷ್ಟಿದೆ. 2024-25ರಲ್ಲಿ ಬಾಕಿ ಉಳಿಸಿಕೊಂಡದ್ದು 607 ಕೋಟಿ ರೂ. ಅಂದರೆ, 1,787 ಕೋಟಿ ರೂ.ಬಾಕಿ ಇದೆ. ಆದರೆ, ಸಿದ್ದರಾಮಯ್ಯ ಜಾತ್ರೆ ಮಾಡುತ್ತಲೇ ಇದ್ದಾರೆ. ಆ ಯೋಜನೆ ತಂದ್ಬಿಟ್ಟಿದ್ದೇವೆ, ಈ ಯೋಜನೆ ತಂದಿದ್ದೇವೆ ಎನ್ನುತ್ತಾರೆ. ಯಾವ ಪುರುಷಾರ್ಥ ಇದೆ ಇದರಲ್ಲಿ ಎಂದು ಪ್ರಶ್ನಿಸಿದರು.

ಕೊಲೆಗಾರರ ಸರಕಾರ: ಕಾಂಗ್ರೆಸ್ ಸರಕಾರದಲ್ಲಿ ಕೊಲೆಗಡುಕರೇ ಹೆಚ್ಚಾಗಿದ್ದಾರೆ. ಇದು ಕೊಲೆಗಾರರ ಸರಕಾರ ಎನ್ನಲು ನೋವಾಗುತ್ತಿದೆ. ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಕುಸಿದುಬಿದ್ದಿದೆ. ಕಲಬುರಗಿಯಲ್ಲಿ ಗುತ್ತಿಗೆದಾರ ಸಚಿನ್ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಕುಟುಂಬದ ಜೊತೆ ಬಿಜೆಪಿ ನಿಲ್ಲಲಿದೆ. ಸಚಿವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ, ಈ ಸರಕಾರ ಸಾವಿನ ಭಾಗ್ಯವನ್ನು ಕೊಟ್ಟಿದೆ ಎಂದು ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News