ಪಕ್ಷಕ್ಕೆ ಸೇರಿಸಿಕೊಳ್ಳುವಾಗ ಹಿನ್ನೆಲೆ ಪರಿಶೀಲನೆ ಮುಖ್ಯ: ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಯಾರನ್ನಾದರೂ ಸೇರಿಸಿಕೊಳ್ಳಬೇಕಾದರೆ ಅವರ ಗುಣ ಏನು?, ಅವರ ಹಿನ್ನೆಲೆ ಏನು? ಅವರು ಯಾವ ತತ್ವವನ್ನು ಪಾಲಿಸುತ್ತಿದ್ದರು ಎನ್ನುವುದನ್ನು ಪರಿಶೀಲನೆ ಮಾಡುವುದು ಬಹಳ ಮುಖ್ಯ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ 75ನೆ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಯಾರೇ ಬಂದರೂ ಸೇರಿಸಿಕೊಂಡು ಶಕ್ತಿಯನ್ನು ತುಂಬುವಂತಹ ಕೆಲಸ ಮಾಡಬೇಕು. ಹಾಗೆ ಪಕ್ಷಕ್ಕೆ ಬರುವವರು ನಿಷ್ಠಾವಂತರಾಗಿರಬೇಕು ಎಂದರು.
ಇವತ್ತು ಬಂದು ನಾಳೆ ಹೋಗುವಂತೆ ಇರಬಾರದು. ನಾವು ಒಂದು ವಸ್ತುವನ್ನು ಕೊಳ್ಳಬೇಕಾದರೆ ಅನೇಕ ಪರೀಕ್ಷೆಗಳನ್ನು ಮಾಡಿ ತೆಗೆದುಕೊಳ್ಳುತ್ತೇವೆ. ಹಾಗೆ ಪಕ್ಷಕ್ಕೆ ಯಾರನ್ನಾದರೂ ತೆಗೆದುಕೊಳ್ಳಬೇಕಾದರೆ ಅವರ ಗುಣ ಏನು? ಅವರ ಹಿನ್ನೆಲೆ ಏನು? ಅವರು ಯಾವ ತತ್ವವನ್ನು ಪಾಲಿಸುತ್ತಿದ್ದವರು. ಇಂದು ಯಾವ ತತ್ವ ಒಪ್ಪಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಪರಿಶೀಲನೆ ಮಾಡುವುದು ಬಹಳ ಮುಖ್ಯ ಎಂದು ಅವರು ಸೂಚಿಸಿದರು.
ಕಾಂಗ್ರೆಸ್ ಪಕ್ಷವು ತತ್ವ ಸಿದ್ಧಾಂತದ ಆಧಾರದ ಮೇಲೆ ನಿಂತಿದೆ. ತತ್ವಕ್ಕಾಗಿಯೇ ನಮ್ಮ ಪಕ್ಷದಲ್ಲಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ತಮ್ಮ ಜೀವವನ್ನೆ ತ್ಯಾಗ ಮಾಡಿದ್ದಾರೆ. ನಮ್ಮ ಪಕ್ಷ ತತ್ವಕ್ಕೆ ಬದ್ಧವಾಗಿದೆ. ನಮಗೆ ಬಡವರು, ರೈತರು, ವಿದ್ಯಾರ್ಥಿಗಳು ಮತ್ತು ಮಹಿಳೆಯರ ಬಗ್ಗೆ ಕಾಳಜಿ ಇದೆ. ಕಾಂಗ್ರೆಸ್ ಪಕ್ಷ ಸಂವಿಧಾನದ ಜೊತೆ ಜೊತೆಗೆ ಮಹಿಳೆಗೆ ಮತದಾನದ ಹಕ್ಕನ್ನು ನೀಡಿತು. ಇದರ ಶ್ರೇಯ ಬಾಬಾ ಸಾಹೇಬರು ಮತ್ತು ಪಂಡಿತ್ ಜವಾಹರ್ ಲಾಲ್ ನೆಹರೂರವರಿಗೆ ಸಲ್ಲುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.