ರೈತರಿಗೆ ಭೂ ಸ್ವಾಧೀನದ ಪರಿಹಾರ ನೀಡದ ಹಿನ್ನೆಲೆ; ಪಾಂಡವಪುರ ಎಸಿ, ಪುರಸಭೆ ಕಚೇರಿ ಉಪಕರಣ ಜಪ್ತಿ ಮಾಡಿದ ಕೋರ್ಟ್​ ಸಿಬ್ಬಂದಿ

Update: 2023-09-01 14:32 GMT

ಮಂಡ್ಯ, ಸೆ.1: ಪಾಂಡವಪುರ ಪುರಸಭೆ ವ್ಯಾಪ್ತಿಯ ಒಳಚರಂಡಿ ಕಾಮಗಾರಿಗೆ ಭೂಮಿ ನೀಡಿದ ರೈತರಿಗೆ ಭೂ ಪರಿಹಾರ ನೀಡದ ಹಿನ್ನೆಲೆ ನ್ಯಾಯಾಲಯ ಆದೇಶದಂತೆ ಪಾಂಡವಪುರ ಉಪವಿಭಾಗಾಧಿಕಾರಿ ಕಚೇರಿಯ ಉಪಕರಣ ಮತ್ತು ಅಧಿಕಾರಿ ವಾಹನ ಹಾಗೂ ಪುರಸಭೆ ಕಚೇರಿಯ ಪೀಠೋಪಕರಣ ಶುಕ್ರವಾರ ಜಪ್ತಿ ಮಾಡಲಾಗಿದೆ. 

ಪಾಂಡವಪುರ ಅಪರ ಸಿವಿಲ್ ನ್ಯಾಯಾಲಯ ಆದೇಶದ ಮೇರೆಗೆ ನ್ಯಾಯಾಲಯದ ಸಿಬ್ಬಂದಿಯಾದ ನಾರಾಯಣಗೌಡ, ಸಿದ್ದರಾಜ್, ತ್ರಿವೇಣಿ, ಆನಂದ ಅವರು ವಕೀಲ ಧರ್ಮಪುರ ಲೋಕೇಶ್ ಸಮ್ಮುಖದಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ಕಚೇರಿಯಲ್ಲಿದ್ದ 13 ಕಂಪ್ಯೂಟರ್, ಅಧಿಕಾರಿಗೆ ಸೇರಿದ ಒಂದು ಬೊಲೆರೋ ವಾಹನ ಹಾಗೂ ಕಚೇರಿಯ ಉಪಕರಣಗಳನ್ನು ಬೆಳಗ್ಗೆ ವಶಪಡಿಸಿಕೊಂಡರು.

ಸಂಜೆ ಸಮಯದಲ್ಲಿ ಪಾಂಡವಪುರ ಪುರಸಭೆಗೆ ತೆರಳಿದ ವಕೀಲರು ಹಾಗೂ ನ್ಯಾಯಾಲಯದ ಆದೇಶದಂತೆ ಪುರಸಭೆ ಕಚೇರಿಯಲ್ಲಿದ್ದ 6 ಕಂಪ್ಯೂಟರ್, 30ಕ್ಕೂ ಹೆಚ್ಚು ದೊಡ್ಡ, ಚಿಕ್ಕದಾದ ವಿವಿಧ ಬಗೆಯ ಚೇರ್‍ಗಳನ್ನು ಕಚೇರಿಯಿಂದ ಹೊರತೆಗೆದು ವಾಹನದಲ್ಲಿ ತುಂಬಿಕೊಂಡು ನ್ಯಾಯಾಲಯದ ವಶದಲ್ಲಿಟ್ಟಿದ್ದಾರೆ.

ಪಾಂಡವಪುರ ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಒಳಚರಂಡಿ ಫಿಲ್ಟರ್ ಕೇಂದ್ರ ನಿರ್ಮಾಣ ಮಾಡುವ ಸಂಬಂಧ ಪಾಂಡವಪುರ ನಿವಾಸಿ ರೈತ ಸತ್ಯನಾರಾಯಣ ಎಂಬುವರಿಗೆ ಸೇರಿದ ವ್ಯವಸಾಯ ಜಮೀನು ಸುಮಾರು 30ಗುಂಟೆ ಜಮೀನನ್ನು ಕಳೆದ 2009ರಲ್ಲಿ ಉಪವಿಭಾಗಾಧಿಕಾರಿ ಹಾಗೂ ಪುರಸಭೆ ಆಡಳಿತ ಮೂಲಕ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಆದರೆ, ಭೂಪರಿಹಾರ ನೀಡಿರಲಿಲ್ಲ.

ಕಾನೂನು ಪ್ರಕಾರ ರೈತ ಸತ್ಯನಾರಾಯಣ ಅವರಿಗೆ ಸರಕಾರದಿಂದ ಭೂಪರಿಹಾರ ನೀಡದ ಹಿನ್ನೆಲೆ ಪರಿಹಾರಕ್ಕಾಗಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಭೂ ಪರಿಹಾರ ನೀಡದ ಕಾರಣ ನ್ಯಾಯಾಲಯದ ಆದೇಶದಂತೆ ಉಪವಿಭಾಗಾಧಿಕಾರಿ ಹಾಗೂ ಪುರಸಭೆ ಕಚೇರಿಯಲ್ಲಿ ಉಪಕರಣ ವಶಕ್ಕೆ ತೆಗೆದುಕೊಳ್ಳಲಾಯಿತು. ಈ ಸಂದರ್ಭದಲ್ಲಿ ವಕೀಲ ಕುಪ್ಪೆಗಾಲ ಪುಟ್ಟಸ್ವಾಮಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News