ಬರಗಾಲ ಘೋಷಣೆ ಹಿನ್ನೆಲೆ; ಮಂಡ್ಯದಲ್ಲಿ ನಡೆಯಬೇಕಿದ್ದ 87ನೇ ಸಾಹಿತ್ಯ ಸಮ್ಮೇಳನ ಮುಂದೂಡಿಕೆ

Update: 2023-09-14 15:46 GMT

ಬೆಂಗಳೂರು, ಸೆ.14: ರಾಜ್ಯದಲ್ಲಿ ಬರ ಪರಿಸ್ಥಿತಿಯನ್ನು ಸರಕಾರ ಘೋಷಿಸಿರುವ ಹಿನ್ನೆಲೆ, ಅದ್ಧೂರಿತನದ ಸಮ್ಮೇಳನಗಳಿಗೆ ಕಡಿವಾಣ ಹಾಕುವ ದೃಷ್ಠಿಯಿಂದ ಈ ಬಾರಿ ಮಂಡ್ಯದಲ್ಲಿ ನಡೆಯಬೇಕಿದ್ದ 87ನೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲಾಗುತ್ತಿದೆ ಎಂದು ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ತಿಳಿಸಿದ್ದಾರೆ.

ಗುರುವಾರ ಪ್ರಕಟನೆ ಹೊರಡಿಸಿರುವ ಅವರು, ರಾಜ್ಯದಲ್ಲಿ ಬರದ ವಾತಾವರಣ ಎದುರಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳನ್ನು ಬರಗಾಲ ಪೀಡಿತ ಜಿಲ್ಲೆ ಎಂದು ಸರಕಾರ ಘೋಷಿಸಿದೆ. ಅದರಲ್ಲೂ ಮಂಡ್ಯ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಗಾಲ ಪೀಡಿತ ಜಿಲ್ಲೆಯೆಂದು ಘೋಷಣೆ ಮಾಡಲಾಗಿದೆ. ಇಂತಹ ಸ್ಥಿತಿಯಲ್ಲಿ ಉತ್ಸವ ನಡೆಸುವುದು ಸರಿಯಲ್ಲ. ಫೆಬ್ರವರಿ ವೇಳೆಗೆ ಪರಿಸ್ಥಿತಿ ನೋಡಿಕೊಂಡು ಉತ್ಸವ ಮಾಡುವುದು ಸೂಕ್ತ ಎಂಬ ಅಭಿಪ್ರಾಯವನ್ನು ಸರಕಾರವೂ ವ್ಯಕ್ತಪಡಿಸಿದೆ ಎಂದು ಹೇಳಿದ್ದಾರೆ.

ಸಮ್ಮೇಳನವನ್ನು ಅರ್ಥಗರ್ಭಿತವಾಗಿ ನಡೆಸಬೇಕೆಂಬ ದೃಷ್ಠಿಯಿಂದ ಮುಂದೂಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರಕಾರದ ಸಹಯೋಗದೊಂದಿಗೆ ಮತ್ತು ಮಂಡ್ಯ ಜಿಲ್ಲಾಡಳಿತ ಜೊತೆಗೂಡಿ ಒಂದು ದಿನಾಂಕ ನಿಗದಿಗೊಳಿಸಿ ಅರ್ಥಪೂರ್ಣ ಸಮ್ಮೇಳನ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಮಹೇಶ ಜೋಶಿ ತಿಳಿಸಿದ್ದಾರೆ.

ಸರಳ ದಸರಾಕ್ಕೆ ಆಗ್ರಹ: ‘ರಾಜ್ಯದಲ್ಲಿ ಬರ ಬಂದಿರುವ ಕಾರಣದಿಂದ ಮೈಸೂರು ದಸರಾ ಸೇರಿದಂತೆ ಎಲ್ಲಾ ಉತ್ಸವಗಳನ್ನು ಸಾಂಕೇತಿಕವಾಗಿ ನಡೆಸಬೇಕು. ಉತ್ಸವಗಳು ಅದ್ಧೂರಿತನವನ್ನು ತೊರೆದು ಸರಳವಾಗಿ ಆಚರಿಸುವ ಮೂಲಕ ಅರ್ಥಪೂರ್ಣವಾಗಿ ಜನರ ನೋವಿಗೆ ಸ್ಪಂದಿಸುವಂತಿರಬೇಕು. ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಬರ ಪರಸ್ಥಿತಿಯನ್ನು ಸರಕಾರ ಮತ್ತು ನಾಡಿನ ಜನತೆ ಸಮರ್ಥವಾಗಿ ಎದುರಿಸಬೇಕು’

-ಮಹೇಶ ಜೋಶಿ, ಕಸಾಪ ಅಧ್ಯಕ್ಷ

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News