ಶಾಲಾ ಮಕ್ಕಳ ಬ್ಯಾಗ್ ಹೊರೆ ಕಡಿಮೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ

Update: 2023-07-08 15:08 GMT

ಬೆಂಗಳೂರು, ಜು.8: ‘ಸರಕಾರಿ ಶಾಲಾ ಮಕ್ಕಳ ಬ್ಯಾಗ್ ಹೊರೆ ಕಡಿಮೆ ಮಾಡಿ, ಸೂಕ್ತ ಸೌಲಭ್ಯದ ಮೂಲಕ ಕಲಿಕೆಯ ವಾತಾವರಣದಲ್ಲಿ ಬದಲಾವಣೆ ತರಲು ಪ್ರಯತ್ನಿಸಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಶನಿವಾರ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಸರಕಾರಿ ಶಾಲೆಗಳ ಅಭಿವೃದ್ಧಿ ಚಟುವಟಿಕೆಯನ್ನು ವೀಕ್ಷಿಸಿದ ನಂತರ ಆಡುಗೋಡಿ ಸರಕಾರಿ ಶಾಲೆಯಲ್ಲಿ 22 ಸರಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಮತ್ತು ಬ್ಯಾಗ್ ಮತ್ತು ಸ್ವೆಟರ್ ಗಳನ್ನು ವಿತರಿಸಿ ಮಾತನಾಡಿದ ಅವರು, ‘ಶಿಕ್ಷಣ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡಿಕೊಂಡಿರಲಿ. ಆದರೆ ನಾವು ಗುಣಾತ್ಮಕ ಶಿಕ್ಷಣದತ್ತ ಒಲವು ಹೊಂದಿದ್ದೇವೆ. ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ರಾಜಕೀಯದ ಅಗತ್ಯವಿಲ್ಲ. ಶಿಕ್ಷಣದಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆ ತರುವ ನಿರೀಕ್ಷೆ ಹೊಂದಿದ್ದೇನೆ ಎಂದರು.

ಸರಕಾರಿ ಶಾಲೆಗಳಿಗೆ ಸೌಲಭ್ಯವಷ್ಟೇ ಅಲ್ಲದೇ ಉತ್ತಮ ರೀತಿಯಲ್ಲಿ ವಿದ್ಯಾದಾನ ಮಾಡಬೇಕಾಗಿದೆ. ದುರಸ್ತಿಗೆ ಸಾಕಷ್ಟು ಹಣದ ಅಗತ್ಯವಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಸಂಪನ್ಮೂಲ ದೊರೆಯುವ ವಿಶ್ವಾಸವಿದೆ ಎಂದ ಅವರು, ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಶಿಕ್ಷಣ ಇಲಾಖೆಗೆ ಹೆಚ್ಚಿನ ಅನುದಾನ ದೊರೆತಿದ್ದು, ಇದರಿಂದ ಸರಕಾರಿ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಪರಿವರ್ತಿಸಲಾಗುವುದು. ಜತೆಗೆ, 10ನೆ ತರಗತಿವರೆಗೆ ಎರಡು ಮೊಟ್ಟೆ ನೀಡುವ ಕಾರ್ಯಕ್ರಮದಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳಣಿಗೆಗೆ ಸಹಕಾರಿಯಾಗಲಿದೆ ಎಂದು ನುಡಿದರು.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ‘ಬಿಟಿಎಂ ಕ್ಷೇತ್ರದ ಶಾಲೆಗಳಲ್ಲಿ ಬದಲಾವಣೆ ತರಲು ತಮಗೆ ಎಲ್ಲ್ಲ ರೀತಿಯ ಸಹಕಾರ ದೊರೆತಿದೆ. ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು, ಶ್ರೀಮಂತ ಕುಟುಂಬದ ಮಕ್ಕಳಿಗೆ ಸಿಗುವ ಹೈಟೆಕ್ ಶಿಕ್ಷಣ ಸೌಲಭ್ಯಗಳು, ಸರಕಾರಿ ಶಾಲಾ ಮಕ್ಕಳಿಗೆ ಸಿಗಬೇಕು ಎನ್ನುವ ಉದ್ದೇಶದಿಂದ 22 ಸರಕಾರಿ ಶಾಲೆಗಳನ್ನು ದತ್ತು ಪಡೆದು ಸಾರ್ವಜನಿಕರ ಸಹಕಾರದಿಂದ ಅಭಿವೃದ್ದಿ ಪಡಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಸದಸ್ಯ ಎಂ.ನಾಗರಾಜು ಸೇರಿದಂತೆ ಪ್ರಮುಖರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News