ಹಬ್ಬ, ಮದುವೆ, ರಾಜಕೀಯ ಕಾರ್ಯಕ್ರಮಗಳಲ್ಲಿ ಪಟಾಕಿ ನಿಷೇಧ: ಸಿಎಂ ಸಿದ್ದರಾಮಯ್ಯ

Update: 2023-10-10 14:08 GMT

ಬೆಂಗಳೂರು, ಅ.10: ರಾಜಕೀಯ ಸಮಾವೇಶ, ಮದುವೆ, ಶುಭ ಸಮಾರಂಭಗಲ್ಲಿ ಅಪಾಯಕಾರಿ ಪಟಾಕಿಗಳ ಬದಲು ಹಸಿರು ಪಟಾಕಿ ಬಳಕೆಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ರಾಜ್ಯ ಸರಕಾರ ಪ್ರಕಟಿಸಿದೆ.

ಅತ್ತಿಬೆಲೆ ಪಟಾಕಿ ದುರಂತದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಂಗಳವಾರ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಚರ್ಚಿಸಿದರು.

ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,  ʻʻಪಟಾಕಿ ಸಿಡಿಸುವಾಗ ಸುಪ್ರೀಂಕೋರ್ಟ್ ಆದೇಶ ಪಾಲನೆ ಕಡ್ಡಾಯವಾಗಿದ್ದು, ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆʻʻ ಎಂದರು.

 ʻʻರಾಜ್ಯದೆಲ್ಲೆಡೆ, ತಪಾಸಣೆ ನಡೆಸಿ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಎಲ್ಲ ಗೋಡೌನ್‌ಗಳು ಹಾಗೂ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಅವುಗಳ ಪರವಾನಗಿ ರದ್ದುಪಡಿಸಬೇಕು ಎಂದು ಸೂಚಿಸಲಾಗಿದೆʻ ಎಂದು ತಿಳಿಸಿದರು. 

ಡಿ.ಕೆ.ಶಿವಕುಮಾರ್‌ ಮಾತನಾಡಿ, ʻʻಅವಘಡಗಳನ್ನು ತಪ್ಪಿಸಲು ಇನ್ನಷ್ಟು ಬಿಗಿ ನಿಯಮಗಳನ್ನು ತರಲಾಗಿದ್ದು ಪಟಾಕಿ ಮಾರಾಟಕ್ಕೆ 5 ವರ್ಷಕ್ಕೆ ಇರುವ ಲೈಸನ್ಸ್‌ ಅನ್ನು ಇನ್ಮುಂದೆ ಪ್ರತಿವರ್ಷವೂ ಹೊಸದಾಗಿ ನವೀಕರಿಸಬೇಕಿದೆ. ಪಟಾಕಿ ಗೊಡೌನ್‌ಗಳ ಮುಂಭಾಗದಲ್ಲಿ ವಿಶಾಲವಾದ ಖಾಲಿ ಜಾಗ ಇರುವುದು ಕಡ್ಡಾಯವಾಗಿದೆʻʻ ಎಂದು ತಿಳಿಸಿದರು. 

ಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್‌ ಗೋಯಲ್‌, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌, ಡಿಜಿಪಿ ಅಲೋಕ್‌ ಮೋಹನ್‌, ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌, ಬೆಂಗಳೂರು ನಗರ ಜಿಲ್ಲಾಧೀಕಾರಿ ಕೆ.ಎ. ದಯಾನಂದ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಶಿವಶಂಕರ್‌ ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು ಮತ್ತು ನಸೀರ್ ಅಹಮದ್ ಹಾಗೂ ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. 

 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News