ಬೆಂಗಳೂರು | ದೂರು ನೀಡಲು ಹೋಗಿದ್ದ ವಕೀಲರನ್ನೇ ಲಾಕಪ್‌ ಗೆ ಹಾಕಿ ದೌರ್ಜನ್ಯ ಆರೋಪ: ದೂರು ದಾಖಲು

Update: 2023-09-09 17:51 GMT

ಬೆಂಗಳೂರು, ಸೆ.9: ಸರಕಾರಿ ಜಮೀನು ಕಬಳಿಕೆ ವಿಚಾರವಾಗಿ ದೂರು ನೀಡಲು ಹೋಗಿದ್ದ ವಕೀಲರನ್ನು ಸೆಲ್ ಒಳಗೆ ಹಾಕಿ ದೌರ್ಜನ್ಯ ಎಸಗಿದ ಆರೋಪದಡಿ ಯಲಹಂಕ ತಾಲೂಕಿನ ರಾಜಾನುಕುಂಟೆ ಠಾಣಾ ಪೊಲೀಸರ ವಿರುದ್ಧ ದೂರು ದಾಖಲಾಗಿರುವ ಬಗ್ಗೆ ವರದಿಯಾಗಿದೆ.

ಯಲಹಂಕ ತಾಲ್ಲೂಕಿನ ಶ್ಯಾನಬೋಗನಹಳ್ಳಿಯ ಸರಕಾರಿ ಜಮೀನು ವಿಚಾರವಾಗಿ ಗ್ರಾಮ ಪಂಚಾಯತಿಯಲ್ಲಿ ಜಗಳ ನಡೆದಿದೆ. ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ ಮಾಡಿದ್ದಾಗಿ ಆರೋಪಿಸಿದಾಗ ಎರಡು ಗುಂಪಿನ ನಡುವೆ ಗಲಾಟೆ ನಡೆದಿದೆ. ಈ ವಿಚಾರವಾಗಿ ವಕೀಲ ಚಂದ್ರಶೇಖರ ಮತ್ತು ಸಹೋದರನಿಂದ ರಾಜಾನುಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರು ಸ್ವೀಕರಿಸಿದ ಪೊಲೀಸರು, ಎರಡು ಕಡೆಯವರ ವಿಚಾರಣೆ ಮಾಡುತ್ತಿದ್ದ ವೇಳೆ ಎದುರು ಗುಂಪಿನವರ ಮುಂದೆ ವಕೀಲ ಚಂದ್ರಶೇಖರ ಅವರನ್ನು ರಾಜಾನುಕುಂಟೆ ಪೊಲೀಸ್ ಇನ್ಸ್‍ಪೆಕ್ಟರ್ ಸೆಲ್ ಒಳಗಡೆ ಹಾಕಿ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದ್ದು, ಸೆ.2ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ವಕೀಲರನ್ನು ಸೆಲ್ ಒಳಗಡೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸ್ ಠಾಣೆಯಲ್ಲಿ ನೊಂದವರಿಗೆ ನ್ಯಾಯ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆ ಘಟನೆ ಸಂಬಂಧ ಠಾಣೆಯ ಸಿಬ್ಬಂದಿ ಕಿರಣ್ ಮತ್ತು ಮೋಹನ್ ಎಂಬವರನ್ನು ಎಸ್‍ಪಿ ಅಮಾನತು ಮಾಡಿದ್ದಾರೆ. ಆದರೆ, ಪ್ರಕರಣ ಸಂಬಂಧ ಎಸ್ಪಿ ಅವರು ಅಮಾಯಕ ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ ಎಂದು ದೂರುದಾರ ಚಂದ್ರಶೇಖರ್ ಆಕ್ರೋಶ ಹೊರಹಾಕಿದ್ದು, ದೌರ್ಜನ್ಯ ಎಸಗಿದ ಇನ್ಸ್ ಪೆಕ್ಟರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News