ಸಚಿವ ಝಮೀರ್ ಅಹ್ಮದ್ ವಿರುದ್ಧ ಶಿಸ್ತು ಕ್ರಮಕ್ಕೆ ಕೆಪಿಸಿಸಿ ಉಪಾಧ್ಯಕ್ಷ ಎ.ಆರ್.ಎಂ.ಹುಸೇನ್ ಆಗ್ರಹ

Update: 2024-11-16 18:06 GMT

ಝಮೀರ್‌ ಅಹ್ಮದ್‌

ಬೆಂಗಳೂರು: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಸಚಿವ ಝಮೀರ್ ಅಹ್ಮದ್ ನೀಡಿರುವ ಹೇಳಿಕೆಯು ವ್ಯಾಪಕ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ ಸ್ವಪಕ್ಷದಿಂದಲೇ ಅವರ ವಿರುದ್ಧ ಕ್ರಮಕ್ಕೆ ಆಗ್ರಹ ಕೇಳಿ ಬಂದಿದೆ. ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಕೆಪಿಸಿಸಿ ಉಪಾಧ್ಯಕ್ಷರಾದ ಎ.ಆರ್.ಎಂ.ಹುಸೇನ್ ಅವರು ಸಚಿವ ಝಮೀರ್‌ ಅಹ್ಮದ್‌ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

"ನಿರ್ಣಾಯಕ ರಾಜಕೀಯ ಸಂದರ್ಭಗಳಲ್ಲಿ ಪಕ್ಷಕ್ಕೆ ಮತ್ತು ಸರಕಾರಕ್ಕೆ ಮುಜುಗರ ಉಂಟು ಮಾಡುವ ವಸತಿ ಸಚಿವರಾದ ಝಮೀರ್ ಅಹ್ಮದ್ ಮೇಲೆ ಪಕ್ಷ ಸೂಕ್ತ ಶಿಸ್ತಿನ ಕ್ರಮ ಕೈಗೊಳ್ಳಬೇಕು. ಹಾಗೆಯೇ ಝಮೀರ್ ಅಹ್ಮದ್ ಮುಂದೆ ಬೇಜವಾಬ್ದಾರಿ ರಹಿತವಾಗಿ ಹೇಳಿಕೆಗಳನ್ನು ಕೊಡಬಾರದೆಂದು ಎಚ್ಚರಿಕೆಯನ್ನು ನೀಡಬೇಕೆಂದು" ಅವರು ಒತ್ತಾಯಿಸಿದ್ದಾರೆ.

ಸಚಿವ ಸ್ಥಾನದ ಘನತೆ ಮತ್ತು ಹಕ್ಕುಬದ್ಧತೆಯ ಜವಾಬ್ದಾರಿಯನ್ನು ಅರಿತುಕೊಳ್ಳದ ಝಮೀರ್ ಅಹ್ಮದ್ ಅವರಿಂದ ಪಕ್ಷಕ್ಕಾಗಲೀ, ಸರಕಾರಕ್ಕಾಗಲೀ ಯಾವುದೇ ಲಾಭವಾಗದೇ ಕೇವಲ ನಷ್ಟವಾಗುತ್ತಿದೆ ಎಂಬುದನ್ನು ಪಕ್ಷದ ಮುಖಂಡರು ಮನದಟ್ಟು ಮಾಡಿಕೊಳ್ಳಬೇಕು. ಇವರ ನಡುವಳಿಕೆಗೆ ತಕ್ಷಣವೇ ಲಗಾಮು ಕಡಿವಾಣ ಹಾಕಬೇಕು ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ರವರು ಜೋಡೆತ್ತುಗಳಂತೆ ಶ್ರಮಿಸುತ್ತಾ ಸರಕಾರವನ್ನು ಮತ್ತು ಪಕ್ಷವನ್ನು ದಕ್ಷತೆಯಿಂದ ಮುನ್ನಡೆಸುತ್ತಿದ್ದಾರೆ. ಜಾತ್ಯಾತೀತ ಮನೋಭಾವನೆಗಳಿಗೆ ಮತ್ತು ಮಾನವೀಯ ಧರ್ಮ- ಸಂಹಿತೆಗೆ ಧಕ್ಕೆಯಾಗದಂತೆ ಸರ್ವರನ್ನು ಅಪ್ಪಿಕೊಂಡು ಮುನ್ನಡೆಸುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಸಚಿವ ಝಮೀರ್ ಅಹ್ಮದ್ ರವರು ಅಮಾನವೀಯ ಹೇಳಿಕೆಗಳನ್ನು ನೀಡುತ್ತಾ, ವಿವಾದಗಳನ್ನು ಹುಟ್ಟು ಹಾಕುತ್ತಾ ಮುನ್ನಡೆಯುತ್ತಿರುವುದು ಕೆಟ್ಟ ವಾತಾವರಣವನ್ನು ಸೃಷ್ಟಿಸಿದೆ ಎಂದು ಹೇಳಿದ್ದಾರೆ.

ಮೊನ್ನೆ ನಡೆದ ಉಪ ಚುನಾವಣೆಯ ಸಂದರ್ಭದಲ್ಲಿ ಸಚಿವ ಝಮೀರ್ ಅಹ್ಮದ್ ರವರು ನೀಡಿದ ಹೇಳಿಕೆಗಳು ಮತ್ತು ಸೃಷ್ಟಿಸಿದ ವಿವಾದಗಳಿಂದ ಪಕ್ಷದ ಮೇಲೆ ದುಷ್ಪರಿಣಾದು ಬೀರಿರುವುದಂತೂ ಸ್ಪಷ್ಟ, ಇದರಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ. ಅದರ ಪರಿಣಾಮವನ್ನು ಝಮೀರ್ ಅಹ್ಮದ್ ಅವರೇ ಎದುರಿಸಬೇಕಾಗುತ್ತದೆ. ರಾಜಕೀಯ ಬೌದ್ಧಿಕತೆ ಕಳೆದುಕೊಂಡಿರುವ ಇಂತಹವರನ್ನು ಪಕ್ಷ ಮತ್ತು ಸರಕಾರ ಮುಖ್ಯ ವಾಹಿನಿಯಲ್ಲಿ ಬಿಂಬಿಸುವುದನ್ನು ಕೈಬಿಟ್ಟರೆ ಕ್ಷೇಮ ಎಂದು ಕೆಪಿಸಿಸಿ ಉಪಾಧ್ಯಕ್ಷರಾದ ಎ.ಆರ್.ಎಂ.ಹುಸೇನ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

"ಕುಮಾರಸ್ವಾಮಿ ಅವರ ಬಗ್ಗೆ ಸಚಿವ ಝಮೀರ್ ಅವರು ಕರಿಯ ಎಂದು ಪದ ಬಳಸಿರುವುದು ತಪ್ಪು. ಅವರನ್ನು ತಿದ್ದುತ್ತೇವೆ. ಕ್ರಮ ತೆಗೆದುಕೊಳ್ಳುವ ಬಗ್ಗೆ ಸಾರ್ವಜನಿಕವಾಗಿ ಹೇಳಲು ಆಗುವುದಿಲ್ಲ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News