ಬೆಂಗಳೂರು| ಆಟೋ ಚಾಲಕನ ಹತ್ಯೆ ಪ್ರಕರಣ: 11 ಆರೋಪಿಗಳ ಬಂಧನ

Update: 2023-12-11 17:23 GMT

ಬೆಂಗಳೂರು: ವೈಯಕ್ತಿಕ ದ್ವೇಷಕ್ಕೆ ಆಟೋ ಚಾಲಕನನ್ನು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆಗೈದಿದ್ದ ಪ್ರಕರಣ ಸಂಬಂಧ 11 ಜನ ಆರೋಪಿಗಳನ್ನು ಇಲ್ಲಿನ ಬ್ಯಾಟರಾಯನಪುರ ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಹರೀಶ್, ಮಧು, ಪ್ರಶಾಂತ್ ಸೇರಿ 11 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಡಿ.5ರಂದು ರಾತ್ರಿ ಬ್ಯಾಟರಾಯನಪುರದ ಟಿಂಬರ್ ಯಾರ್ಡ್ ಲೇಔಟ್‍ನಲ್ಲಿ ಆಟೋ ಚಾಲಕ ಅರುಣ್(24) ಎಂಬಾತನನ್ನು ಹತ್ಯೆಗೈಯ್ಯಲಾಗಿತ್ತು. ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದ ಅರುಣ್, ಮನೆ ಬಳಿ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ ಬಂದಿದ್ದ ಆರೋಪಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆಗೈದು ಸ್ಥಳದಿಂದ ಪರಾರಿಯಾಗಿದ್ದರು.

ಪ್ರಕರಣದ ಪ್ರಮುಖ ಆರೋಪಿ ಹರೀಶ್ ಈ ಹಿಂದೆ ಒಂದು ಹತ್ಯೆ ಪ್ರಕರಣದಲ್ಲಿ ಬಂಧನವಾಗಲು ಅರುಣ್ ಕಾರಣವಾಗಿದ್ದ. ಅಂದಿನಿಂದಲೂ ಹರೀಶ್ ಮತ್ತು ಅರುಣ್ ನಡುವೆ ವೈಷಮ್ಯವಿತ್ತು. ಇತ್ತೀಚೆಗೆ ಹರೀಶ್ ವಿರೋಧಿಗಳ ಪರವಾಗಿ ಅರುಣ್ ಸಹಾಯ ಮಾಡುತ್ತಿದ್ದ. ಹರೀಶ್ ಮನೆ ಬಳಿ ಓಡಾಡುವುದು, ಆತನ ಬಗ್ಗೆ ವಿಚಾರಿಸುವುದನ್ನು ಮಾಡಲಾರಂಭಿಸಿದ್ದ. ಈ ವಿಚಾರ ತಿಳಿದ ಹರೀಶ್, ಅರುಣ್ ಹತ್ಯೆಗೆ ಸಂಚು ರೂಪಿಸಿದ್ದ. ಅದರಂತೆ ಡಿ.5ರಂದು ಟಿಂಬರ್ ಯಾರ್ಡ್ ಲೇಔಟ್ ರಸ್ತೆಯಲ್ಲಿ ಉಳಿದ ಆರೋಪಿಗಳ ಜೊತೆ ಸೇರಿ ಅರುಣ್‍ನನ್ನು ಹತ್ಯೆಗೈದಿದ್ದ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದ ಬ್ಯಾಟರಾಯನಪುರ ಠಾಣಾ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು.

ತನಿಖೆ ವೇಳೆ ಅರುಣ್ ವಿರುದ್ಧವೂ ಈ ಹಿಂದೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿರುವುದು ತಿಳಿದು ಬಂದಿತ್ತು. ಹಳೆ ದ್ವೇಷದಿಂದ ಹತ್ಯೆಗೈದಿರುವ ಶಂಕೆಯ ಆಧಾರದಲ್ಲಿ ತನಿಖೆ ಕೈಗೊಂಡ ಬ್ಯಾಟರಾಯನಪುರ ಠಾಣೆಯ ಪೊಲೀಸರು, 11 ಜನ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News