ಬೆಂಗಳೂರು ಬಂದ್‌ ವಾಪಸ್‌ ಪಡೆದ ಖಾಸಗಿ ಸಾರಿಗೆ ಒಕ್ಕೂಟ

Update: 2023-09-11 09:36 GMT

ಬೆಂಗಳೂರು: ಖಾಸಗಿ ವಾಹನ ಸಂಘಟನೆಗಳ ಸದಸ್ಯರು ಕರೆ ನೀಡಿದ್ದ ಬೆಂಗಳೂರು ಬಂದ್‌ ವಾಪಸ್‌ ಪಡೆಯಲಾಗಿದೆ. 

ನಗರದ ಫ್ರೀಡಂಪಾರ್ಕ್​ ನಲ್ಲಿ ಖಾಸಗಿ ವಾಹನ ಸಂಘಟನೆಗಳ ಸದಸ್ಯರು ಪ್ರತಿಭಟನೆ ಮಾಡುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ,​ ಪ್ರತಿಭಟನಾಕಾರರ ಭರವಸೆಗಳನ್ನು ಈಡೇರಿಸುವ ಭರವಸೆ ನೀಡಿದ ಹಿನ್ನೆಲೆ ಖಾಸಗಿ ಸಾರಿಗೆ ಒಕ್ಕೂಟ ಬಂದ್‌ ಕೈ ಬಿಟ್ಟಿದೆ. 

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಸಂಘಟನೆಗಳ ಬೇಡಿಕೆ ಆಲಿಸಿ ಬಳಿಕ ಮಾತನಾಡಿದ್ದು, ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟಗಳ ಬಹುತೇಕ ಬೇಡಿಕೆ ಈಡೇರಿಸುತ್ತೇವೆ ಎಂದು ಹೇಳಿದ್ದಾರೆ.

ʼʼಚಾಲಕರ ಅಭಿವೃದ್ಧಿ ನಿಗಮ ಸ್ಥಾಪನೆ ಬಗ್ಗೆ ಸಿಎಂ ಜತೆ ಚರ್ಚೆ ಮಾಡಿದ್ದೇನೆ. ನಿಗಮ ಮಂಡಳಿಯನ್ನು ಮಾಡೇ ಮಾಡ್ತೇವೆ. ಅವರ ಸಮಸ್ಯೆಗಳು ಈ ಸರ್ಕಾರ ಬಂದಾಗಿನಿಂದ ಒರೋದಲ್ಲ ಹಿಂದಿನಿಂದಲೂ ಇದೆ. ಆದರೆ ಶಕ್ತಿ ಯೋಜನೆಯಿಂದ ಸಮಸ್ಯೆಯಾಗಿದೆ ಎಂದು ಅವರು ಹೇಳುತ್ತಿದ್ದಾರೆ. ಓಲಾ-ಊಬರ್ ಕುರಿತ 4 ಕೇಸ್‌ಗಳು ಕೋರ್ಟ್‌ನಲ್ಲಿವೆ. ವಕೀಲರೊಂದಿಗೆ ಈ ಬಗ್ಗೆ ಚರ್ಚಿಸಿ ಬೇಗ ಬಗೆಹರಿಸುವ ಪ್ರಯತ್ನ ಮಾಡಲಾಗುವುದು. ಇದರ ಜೊತೆ ಬೈಕ್ ಟ್ಯಾಕ್ಸಿ ಕೇಸ್ ಸಹ ಕೋರ್ಟ್‌ನಲ್ಲಿದೆ. ಹೀಗಾಗಿ ಈ ಕೇಸ್‌ಗಳ ವೆಕೇಟ್ ಮಾಡಲು ವಕೀಲರ ಬಳಿ ಮಾತನಾಡಲಾಗುವುದುʼʼ ಎಂದಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಖಾಸಗಿ ಸಾರಿಗೆ ಒಕ್ಕೂಟದ ಪ್ರಮುಖ ನಟರಾಜ್ ಶರ್ಮಾ, ʼʼನಾವು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಸ್ವತಃ ಸಾರಿಗೆ ಸಚಿವರೇ ಆಗಮಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ. ನಾಳೆಯಿಂದಲೇ ನಮ್ಮ ಬೇಡಿಕೆಗಳನ್ನು ಈಡೇರಿಸಲು ಮುಂದಾಗುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಬಂದ್ ವಾಪಸ್ ಪಡೆದುಕೊಂಡಿದ್ದೇವೆʼʼ ಎಂದು ತಿಳಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News