ಬೆಂಗಳೂರು | ನಕಲಿ ಕೀ ಬಳಸಿ ಮದುವೆಗಿಟ್ಟಿದ್ದ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ: ಆರೋಪಿ ಬಂಧನ
ಬೆಂಗಳೂರು, ಅ.3: ಇಡೀ ಕುಟುಂಬವು ಮದುವೆಗೆ ಹೋಗಿದ್ದ ಮನೆಯೊಂದಕ್ಕೆ ನಕಲಿ ಕೀ ಬಳಸಿ ನುಗ್ಗಿ ನಗದು ಸೇರಿ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದ ಆರೋಪಿಯನ್ನು ಬಂಧಿಸಿರುವ ತಿಲಕ್ ನಗರ ಪೊಲೀಸರು, ಆತನಿಂದ 1.10 ಕೋಟಿ ರೂ. ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ, ಪ್ರಕರಣದ ಸಂಬಂಧ ಜಯನಗರದ ಒಂದನೇ ಬ್ಲಾಕ್‍ನ ಭೈರಸಂದ್ರದ ಆರೋಪಿ ಮುಹಮ್ಮದ್ ರಫೀಕ್ ಯಾನೆ ರಫೀಕ್(35) ಎಂಬುವನನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ʼʼಸೆ.23 ರಂದು ತಿಲಕ್ ನಗರದ ವ್ಯಕ್ತಿಯು ಮೊಮ್ಮಗಳ ಮದುವೆಗಾಗಿ ಸುಮಾರು ಎರಡೂಕಾಲು ಕೆಜಿ ಚಿನ್ನಾಭರಣ ಖರೀದಿಸಿ ಮದುವೆಯ ಖರ್ಚಿಗಾಗಿ 10 ಲಕ್ಷ ರೂ. ನಗದು ಹಣವನ್ನು ತಂದಿಟ್ಟಿದ್ದರು.ಈ ಮಧ್ಯೆ ಸಂಬಂಧಿಕರ ವಿವಾಹಕ್ಕೆ ವ್ಯಕ್ತಿಯ ಕುಟುಂಬದವರು ಮನೆಗೆ ಬೀಗ ಹಾಕಿಕೊಂಡು ರಾಮನಗರಕ್ಕೆ ಹೋಗಿದ್ದರು. ಮನೆಗೆ ಬೀಗ ಹಾಕಿ ಯಾರೂ ಇಲ್ಲದ್ದು ಗಮನಿಸಿ ಹತ್ತಿರದ ಸಂಬಂಧಿಯೇ ಆಗಿದ್ದ ಆರೋಪಿಯು ನಕಲಿ ಕೀ ಬಳಸಿ ಒಳನುಗ್ಗಿ. ಸುಮಾರು ಎರಡು ಕಾಲು ಕೆಜಿ ಚಿನ್ನಾಭರಣ, 10 ಲಕ್ಷ ರೂ. ನಗದು ಕಳ್ಳತನ ಮಾಡಿ ಪರಾರಿಯಾಗಿದ್ದʼʼ
ʼʼಮದುವೆ ಕಾರ್ಯಕ್ರಮ ಮುಗಿಸಿ ವಾಪಸ್ಸಾದ ಕುಟುಂಬಸ್ಥರು ಕಳ್ಳತನವಾಗಿರುವುದನ್ನು ಕಂಡು ತಿಲಕ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತಿಲಕ್‍ನಗರ ಪೊಲೀಸ್ ಇನ್ ಸ್ಪೆಕ್ಟರ್ ವಿಶ್ವನಾಥ್ ಅವರ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆ ಕೈಗೊಂಡು ತಂತ್ರಜ್ಞಾನದ ನೆರವು ಇನ್ನಿತರ ಮಾಹಿತಿಯನ್ನು ಆಧರಿಸಿ ಆರೋಪಿಯನ್ನು ಬಂಧಿಸಿ ಆತನಿಂದ ರೂ 1,10,60,000 ರೂ. ಬೆಲೆ ಬಾಳುವ 1 ಕೆಜಿ 800 ಗ್ರಾಂ ಚಿನ್ನಾಭರಣಗಳು, 74 ಸಾವಿರ ರೂ. ನಗದು ಜಪ್ತಿ ಮಾಡಲಾಗಿದೆʼʼ ಎಂದು ತಿಳಿಸಿದರು.
ʼʼಆರೋಪಿ ಕದ್ದ ಹಣದಿಂದ ಆನ್‍ಲೈನ್ ಆ್ಯಪ್‍ನಿಂದ ಮಾಡಿಕೊಂಡಿದ್ದ ಸಾಲ ತೀರಿಸಿದ್ದು ಆತನನ್ನು ಹೆಚ್ಚಿನ ವಿಚಾರಣೆಗೊಳಪಡಿಸಿ ಬೇರೆಡೆ ಕಳ್ಳತನ ಮಾಡಿರುವ ಪ್ರಕರಣಗಳು ಬಯಲಿಗೆಳೆಯಲು ಮುಂದಾಗಿದ್ದಾರೆʼʼ ಎಂದು ಬಿ.ದಯಾನಂದ ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ, ಡಿಸಿಪಿ ಸಿಕೆ ಬಾಬಾ ಇದ್ದರು.