ಬೆಂಗಳೂರು | ಆಶ್ರಯನಗರ ಬಡಾವಣೆಯಲ್ಲಿ ಅಕ್ರಮ 200 ಮನೆಗಳ ತೆರವು
ಬೆಂಗಳೂರು: ನಗರದ ಗೊರೆಗುಂಟೆಪಾಳ್ಯ ಬಳಿಯ ಆಶ್ರಯ ನಗರ ಬಡಾವಣೆಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಆರೋಪದಡಿಯಲ್ಲಿ 200 ಮನೆಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಜೆಸಿಬಿ ಮೂಲಕ ಗುರುವಾರ ನೆಲಸಮಗೊಳಿಸಿದೆ.
ಆ ಮೂಲಕ 30-40 ವರ್ಷಗಳಿಂದ ಸ್ಥಳದಲ್ಲಿ ವಾಸ ಮಾಡುತ್ತಿದ್ದ ಮನೆಗಳು ಧರೆಗುರುಳಿವೆ. ಈ ಮೊದಲೇ ಆಶ್ರಯ ನಗರ ಬಡಾವಣೆಯಲ್ಲಿ ಜಾಗ ಖಾಲಿ ಮಾಡುವಂತೆ ಬಿಡಿಎನಿಂದ ಸೂಚನೆ ನೀಡಲಾಗಿತ್ತು. ಆದರೆ, ಜಾಗ ಖಾಲಿ ಮಾಡದ ಹಿನ್ನೆಲೆ ತೆರವು ಕಾರ್ಯಾಚರಣೆ ಮಾಡಲಾಗಿದೆ. ಮನೆಗಳನ್ನು ಬಿಡಿಎ ನೆಲಸಮ ಮಾಡಿದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ಮಹಿಳೆಯೊಬ್ಬರು, ಪ್ರತಿ ಮನೆಯಲ್ಲಿ ವಯಸ್ಸಾದವರು, ಬಾಣಂತಿಯರು ಸೇರಿದಂತೆ ಅನಾರೋಗ್ಯ ಪೀಡಿತರಿದ್ದಾರೆ. ಈ ರೀತಿ ಮನೆ ನೆಲಸಮ ಮಾಡಿದರೆ ಅವರು ಎಲ್ಲಿಗೆ ಹೋಗಬೇಕು. ಇದಕ್ಕೆಲ್ಲಾ ಅಧಿಕಾರಿಗಳೇ ಉತ್ತರ ನೀಡಬೇಕು. ಜನರು ಕಣ್ಣೀರು ಹಾಕುತ್ತಿದ್ದಾರೆ. ಇದಕ್ಕೆಲ್ಲಾ ಪರಿಹಾರ ಕೊಡಬೇಕು ಎಂದು ಅಳಲು ತೊಡಿಕೊಂಡಿದ್ದಾರೆ.