ಬೆಂಗಳೂರು | ಸರಕಾರಿ ಕೆಲಸ ಕೊಡಿಸುವುದಾಗಿ ವಂಚನೆ ಆರೋಪ : ಹೆಡ್ ಕಾನ್‍ಸ್ಟೇಬಲ್ ಅಮಾನತು

Update: 2024-10-20 14:11 GMT

ಬೆಂಗಳೂರು : ಸರಕಾರಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ಹಣ ಪಡೆದು ವಂಚಿಸಿದ್ದ ಆರೋಪದಡಿ ಪೊಲೀಸ್ ಹೆಡ್ ಕಾನ್‍ಸ್ಟೇಬಲ್ ಓರ್ವರನ್ನು ಅಮಾನತುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಗರದ ಸಶಸ್ತ್ರ ಮೀಸಲು ಪೊಲೀಸ್ ಪ್ರಧಾನ ಕಚೇರಿಯಲ್ಲಿ ಹೆಡ್ ಕಾನ್‍ಸ್ಟೇಬಲ್ ಆಗಿರುವ ಪ್ರಶಾಂತ್ ಕುಮಾರ್ ಅಮಾನತುಗೊಂಡವರು ಎಂದು ತಿಳಿದುಬಂದಿದೆ.

ಸರಕಾರಿ ಕೆಲಸ ಕೊಡಿಸುವುದಾಗಿ ವಂಚಿಸಿದ್ದ ಆರೋಪದಡಿ ಭಾಗ್ಯಮ್ಮ ಎಂಬುವವರು ನೀಡಿದ್ದ ದೂರಿನನ್ವಯ ಹೆಡ್ ಕಾನ್‍ಸ್ಟೇಬಲ್ ಪ್ರಶಾಂತ್ ಕುಮಾರ್, ಅವರ ಪತ್ನಿ ದೀಪಾ ಮತ್ತು ಮಂಜುನಾಥ್ ಪ್ರಸಾದ್ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿವರ: 2011ರಲ್ಲಿ ಪರಿಚಯವಾಗಿದ್ದ ಪ್ರಶಾಂತ್ ಕುಮಾರ್ ಬಳಿ ‘ತಮ್ಮ ಇಬ್ಬರು ಮಕ್ಕಳಿಗೆ ಸರಕಾರಿ ಕೆಲಸ ಕೊಡಿಸಿ’ ಎಂದು ಕೇಳಿದ್ದೆ. ಆಗ ತನಗೆ ಹಲವು ಸರಕಾರಿ ಅಧಿಕಾರಿಗಳು ಪರಿಚಯವಿದ್ದಾರೆ, ನಾನು ಕೆಲಸ ಕೊಡಿಸುತ್ತೇನೆ ಎಂದು ಪ್ರಶಾಂತ್ ಭರವಸೆ ನೀಡಿದ್ದರು. ‘ನಿಮ್ಮ ಇಬ್ಬರು ಮಕ್ಕಳಿಗೆ 3 ತಿಂಗಳಲ್ಲಿ ಎಫ್‍ಡಿಎ, ಎಸ್‍ಡಿಎ ಶ್ರೇಣಿಯ ಕೆಲಸ ಕೊಡಿಸುವುದಾಗಿ’ ಭರವಸೆ ನೀಡಿದ್ದರು. ಮತ್ತು ಅದಕ್ಕೆ ಪ್ರತಿಯಾಗಿ 25 ಲಕ್ಷ ರೂ. ಬೇಡಿಕೆ ಇಟ್ಟಿದ್ದರು.

ನಂತರ ಮಂಜುನಾಥ್ ಪ್ರಸಾದ್ ಎಂಬಾತನನ್ನು ತನ್ನ ಪಿಎ ಎಂದು ಪ್ರಶಾಂತ್ ಕುಮಾರ್ ಪರಿಚಯ ಮಾಡಿಸಿದ್ದರು. ಆ ಬಳಿಕ ಹಂತ ಹಂತವಾಗಿ ಒಟ್ಟು 47 ಲಕ್ಷ ರೂ. ಹಣ, 857 ಗ್ರಾಂ ಚಿನ್ನಾಭರಣವನ್ನೂ ಪಡೆದಿದ್ದು, ಯಾವುದೇ ಸರಕಾರಿ ನೌಕರಿ ಕೊಡಿಸಿಲ್ಲ' ಎಂದು ಆರೋಪಿಸಿ ಭಾಗ್ಯಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News