ಬೆಂಗಳೂರು | ಆ.27ರಂದು ಹುಸೇನ್ ಡೇ ಆಚರಣೆ: ಆಗಾ ಸುಲ್ತಾನ್

Update: 2023-08-24 14:46 GMT

ಬೆಂಗಳೂರು, ಆ.24: ‘ವೈವಿಧ್ಯತೆ ಮತ್ತು ಐಕ್ಯತೆ’ ವಿಷಯಾಧಾರಿತವಾಗಿ ಆ.27ರಂದು ಸಂಜೆ 4 ಗಂಟೆಗೆ ನಗರದ ಸೆಂಟ್ ಜೋಸೆಫ್ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ 31ನೆ ವರ್ಷದ ‘ಹುಸೇನ್ ಡೇ’ ಆಚರಿಸಲಾಗುತ್ತಿದೆ ಎಂದು ಕಾರ್ಯಕ್ರಮದ ಸಂಚಾಲಕ ಆಗಾ ಸುಲ್ತಾನ್ ತಿಳಿಸಿದರು.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 1991ರಲ್ಲಿ ಇಮಾಮಿಯಾ ಇಂಗ್ಲಿಷ್ ಪ್ರೌಢ ಶಾಲೆಯ ಸಂಸ್ಥಾಪಕ ಪ್ರಾಂಶುಪಾಲ ಮಿರ್ಝಾ ಮುಹಮ್ಮದ್ ಯಾನೆ ಕಿಫಾಯತ್ ಸರ್ ಅವರು ‘ಹುಸೇನ್ ಡೇ’ ಕಾರ್ಯಕ್ರಮ ಆಯೋಜಿಸುವುದನ್ನು ಪ್ರಾರಂಭಿಸಿದರು. ಅಂದಿನಿಂದಲೂ ನಿರಂತರವಾಗಿ 30 ವರ್ಷಗಳಿಂದ ನಾವು ಈ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ ಎಂದರು.

ಮಾನವೀಯ ಮೌಲ್ಯಗಳ ರಕ್ಷಣೆ, ಸಹಿಷ್ಣುತೆ, ತ್ಯಾಗ, ಬಲಿದಾನ, ಸಾಮಾಜಿಕ ನ್ಯಾಯ ಹಾಗೂ ಇತರ ಧರ್ಮೀಯರನ್ನು ಗೌರವಿಸುವ ಪ್ರವಾದಿ ಮುಹಮ್ಮದ್(ಸ) ಹಾಗೂ ಅವರ ಮೊಮ್ಮಗ ಇಮಾಮ್ ಹುಸೇನ್(ಅ) ಅವರ ಸಂದೇಶವನ್ನು ಪ್ರತಿ ವರ್ಷ ಜಗತ್ತಿಗೆ ಸಾರಲು ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಇದರಲ್ಲಿ ರಾಜಕೀಯ ನಾಯಕರು, ಬುದ್ಧಿಜೀವಿಗಳು, ಧಾರ್ಮಿಕ ಮುಖಂಡರು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಎಲ್ಲ ಧರ್ಮ, ಜಾತಿ, ವರ್ಗ, ಪಂಗಡದವರು ಭಾಗವಹಿಸುತ್ತಾರೆ ಎಂದು ಆಗಾ ಸುಲ್ತಾನ್ ಹೇಳಿದರು.

ನಮ್ಮ ದೇಶದಲ್ಲಿನ ಈಗಿನ ವಾತಾವರಣ ನೋಡಿದರೆ ಇಂತಹ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸಬೇಕಿದೆ. ಎಲ್ಲೆಡೆ ಹರಡುತ್ತಿರುವ ದ್ವೇಷವನ್ನು ಅಳಿಸಬೇಕಿದೆ. ಇಮಾಮ್ ಹುಸೇನ್ ಕೇವಲ ಮುಸ್ಲಿಮರಿಗೆ ಸೀಮಿತವಲ್ಲ, ಅವರು ಇಡೀ ವಿಶ್ವಕ್ಕೆ ಸೇರಿದವರು. ನಾವು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯಲು ಪ್ರಯತ್ನಿಸೋಣ ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News