ಬೆಂಗಳೂರು ಕಂಬಳ; ನ.25ಕ್ಕೆ ಅರಮನೆ ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಚಾಲನೆ

Update: 2023-11-22 16:00 GMT

ಬೆಂಗಳೂರು: ರಾಜಧಾನಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನ.25 ಮತ್ತು 26ರಂದು ಯಾವುದೇ ಒಂದು ಪಕ್ಷ ಹಾಗೂ ಸಮಾಜಕ್ಕೆ ಸೀಮಿತಗೊಳ್ಳದೆ ಧರ್ಮತೀತ ಹಾಗೂ ಜಾತ್ಯಾತೀತವಾಗಿ ‘ಬೆಂಗಳೂರು ಕಂಬಳ ನಮ್ಮ ಕಂಬಳ' ಶೀರ್ಷಿಕೆಯಡಿ ಎರಡು ದಿನಗಳ ಕಾಲ ಕಂಬಳ ಕ್ರೀಡೆಯನ್ನು ಆಯೋಜಿಸಲಾಗಿದೆ ಎಂದು ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಬುಧವಾರ ನಗರದ ಖಾಸಗಿ ಹೋಟೆಲ್‌ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನ.25ರ ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಬಳಕ್ಕೆ ಚಾಲನೆ ನೀಡಲಿದ್ದು, ನ.26ರಂದು ಸಂಜೆಯವರೆಗೆ ಕಂಬಳ ನಡೆಯಲಿದೆ. ಕಂಬಳದಲ್ಲಿ ಭಾಗವಹಿಸಲು 228 ಜೊತೆ ಕೋಣಗಳು ಹೆಸರು ನೋಂದಾಯಿಸಿದ್ದವು. ಈ ಪೈಕಿ 200 ಜತೆ ಕೋಣಗಳನ್ನು ಆಯ್ಕೆ ಮಾಡಲಾಗಿದೆ. ಇವುಗಳಲ್ಲಿ ಮುಸ್ಲಿಮ್ ಸಮುದಾಯದ ಆರು ಜೊತೆ ಕೋಣಗಳು ಸೇರಿದಂತೆ ಕ್ರಿಶ್ಚಿಯನ್ ಸಮುದಾಯದ ಕೋಣಗಳೂ ಭಾಗವಹಿಸಲಿದ್ದು, ಎಲ್ಲ ಸಮುದಾಯಗಳನ್ನು ಒಳಗೊಂಡ ಕಾರ್ಯಕ್ರಮ ಇದಾಗಲಿದೆ ಎಂದು ತಿಳಿಸಿದರು.

ಎರಡು ದಿನಗಳ ಕಂಬಳದಲ್ಲಿ ಸುಮಾರು 8ರಿಂದ 10 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ. ಕಂಬಳ ಇದೊಂದು ಜಾನಪದ ಕಲೆಯೂ ಹೌದು, ಸಂಸ್ಕತಿಯೂ ಹೌದು. ಇದನ್ನು ಬೆಂಗಳೂರಿಗರಿಗೂ ಪರಿಚಯಿಸಲಾಗುವುದು. ನಗರದಲ್ಲಿ 18 ಲಕ್ಷ ಮಂದಿ ಕರಾವಳಿಗರು ನೆಲೆಸಿದ್ದಾರೆ. ಇವರಿಗೆ ಕಂಬಳವನ್ನು ತಿಳಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಏರ್ಪಡಿಸಲಾಗಿದೆ. ಇದರ ಯಶಸ್ಸನ್ನು ಆಧರಿಸಿ ಮುಂಬರುವ ವರ್ಷಗಳಲ್ಲೂ ಆಯೋಜಿಸುವ ಗುರಿ ಹೊಂದಲಾಗಿದೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.

ಕಂಬಳ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ ಮಾತನಾಡಿ, ಬೆಂಗಳೂರಿನಲ್ಲಿರುವ ಕರಾವಳಿ ಮೂಲದ 65 ಸಂಘಟನೆಗಳು ಕಂಬಳ ಸ್ಪರ್ಧೆಗೆ ಸಹಕಾರ ನೀಡಿದ್ದು, ಇಂದಿನ ಯುವಕರು ಹಾಗೂ ಎಲ್ಲ ಜನತೆಗೆ ಕಂಬಳ ಪರಿಚಯಿಸುವುದು ಇದರ ಉದ್ದೇಶ ಎಂದರು. ಸಮಿತಿಯ ಉಪಾಧ್ಯಕ್ಷ ಉಪೇಂದ್ರ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

8 ಕೋಟಿ ರೂ.ಖರ್ಚು: ‘ಕಂಬಳ ಉತ್ಸವಕ್ಕೆ ಒಟ್ಟಾರೆ ಸುಮಾರು 8 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಇದರಲ್ಲಿ ರಾಜ್ಯ ಸರಕಾರ 1 ಕೋಟಿ ರೂ. ಅನುದಾನ ನೀಡುತ್ತಿದೆ. ಉಳಿದಂತೆ ವಿವಿಧ ಸಂಘಟನೆಗಳು ನೆರವು ನೀಡುತ್ತಿವೆ. 65 ಸಂಘಟನೆಗಳಿದ್ದು, ಎಲ್ಲರ ಸಲಹೆ, ಮಾರ್ಗದರ್ಶನದೊಂದಿಗೆ ಈ ಕಾರ್ಯಕ್ರಮ ನಡೆಸಲಾಗುತ್ತಿದೆ’ ಎಂದು ಸಮಿತಿಯ ಉಪಾಧ್ಯಕ್ಷ ಉಪೇಂದ್ರ ಶೆಟ್ಟಿ ತಿಳಿಸಿದರು.

ದಾಖಲೆಯ ಕಂಬಳ: ʼ155 ಮೀಟರ್ ಕೆರೆ (ಕಂಬಳದ ಟ್ರ್ಯಾಕ್) ನಿರ್ಮಿಸಲಾಗಿದೆ. ಕೆಲವರು ಬೆಂಗಳೂರಿನ ಕಂಬಳಕ್ಕೆಂದೇ 15 ಜೊತೆ ಕೋಣಗಳನ್ನು ಖರೀದಿಸಿದ್ದಾರೆ. ದೊಡ್ಡ ಕೆರೆ, ಹೆಚ್ಚು ಕೋಣಗಳು ಭಾಗವಹಿಸುತ್ತಿರುವುದು ಇದೇ ಮೊದಲು. ಹೀಗಾಗಿ ಇದು ದಾಖಲೆ ನಿರ್ಮಿಸಲಿದೆ’ ಎಂದು ಉಪೇಂದ್ರ ಶೆಟ್ಟಿ ಹೇಳಿದರು.

ವಿಜೇತ ಕೋಣಗಳಿಗೆ ಚಿನ್ನದ ಬಹುಮಾನ: ವಿಜೇತವಾದ ಕೋಣೆಗಳಿಗೆ ಮೊದಲ ಬಹುಮಾನವಾಗಿ 16 ಗ್ರಾಂ ಚಿನ್ನ ಹಾಗೂ ಒಂದು ಲಕ್ಷ ರೂ. ನಗದು, ದ್ವಿತೀಯ ಬಹುಮಾನವಾಗಿ 8 ಗ್ರಾಂ ಚಿನ್ನ ಮತ್ತು 50 ಸಾವಿರ ನಗದು, 3ನೇ ಬಹುಮಾನವಾಗಿ 4 ಗ್ರಾಂ ಚಿನ್ನ ಮತ್ತು 25 ಸಾವಿರ ನಗದು ನೀಡಲಾಗುವುದು ಎಂದು ಸಮಿತಿ ತಿಳಿಸಿದೆ.

ಪಾರ್ಕಿಂಗ್ ವ್ಯವಸ್ಥೆ: ಕೋರಿ ರೊಟ್ಟಿ, ಮೀನು ಖಾದ್ಯಗಳು ಸೇರಿದಂತೆ ಕರಾವಳಿ ಭಾಗದ ತಿನಿಸುಗಳು, ಅಲ್ಲಿನ ವಿಶೇಷ ವಸ್ತುಗಳು, ಪದಾರ್ಥಗಳ ಮಾರಾಟಕ್ಕೆಂದು 180 ಮಳಿಗೆಗಳನ್ನು ತೆರೆಯಲಾಗುವುದು. 1 ಲಕ್ಷ ಮಂದಿ ಗಣ್ಯರು, ಕಾರ್ಯಕರ್ತರಿಗಾಗಿ ಬೆಂಗಳೂರು ಹೋಟೆಲ್ ಮಾಲಕರ ಸಂಘದಿಂದ ಉಚಿತ ಊಟ, ತಿಂಡಿಯ ವ್ಯವಸ್ಥೆ ಮಾಡಲಾಗಿದೆ. (ಸಾರ್ವಜನಿಕರು ಹಣ ಕೊಟ್ಟು ಖಾದ್ಯಗಳನ್ನು ಖರೀದಿಸಬೇಕು) 24 ಎಕರೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಶೀಘ್ರದಲ್ಲೇ ಯಾರು, ಯಾವ ವಾಹನ, ಯಾವ ಪ್ರವೇಶ ದ್ವಾರದಲ್ಲಿ ಬರಬೇಕು ಎಂಬುದನ್ನು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳ ಮೂಲಕ ಜನರಿಗೆ ಮಾಹಿತಿ ನೀಡಲಾಗುವುದು ಎಂದು ಸಮಿತಿ ಹೇಳಿದೆ.

ಉಚಿತ ಪ್ರವೇಶ: ಕಂಬಳಕ್ಕೆ ಭಾಗವಹಿಸುವ ಸಾರ್ವಜನಿಕರಿಗೆ ಪ್ರವೇಶ ಉಚಿತವಿರುತ್ತದೆ. ಮುಂಗಡವಾಗಿ ಬಂದ ಸುಮಾರು 6-7 ಸಾವಿರ ಮಂದಿಗೆ ಗ್ಯಾಲರಿಯಲ್ಲಿ ವೀಕ್ಷಣೆಗೆ ಅವಕಾಶವಿರುತ್ತದೆ. ಗಣ್ಯರಿಗೆ ಪ್ರತ್ಯೇಕ ಗ್ಯಾಲರಿಯಿರುತ್ತದೆ ಎಂದು ಸಮಿತಿ ತಿಳಿಸಿದೆ.

ಕೋಣಗಳಿಗೆ ಊರಿಂದಲೇ ನೀರು: ಕಂಬಳ ಕೂಟಕ್ಕೆ ಲಾರಿಗಳ ಮೂಲಕ ಕೋಣಗಳು ತೆರಳಲಿದ್ದು, ನ.23ರ ಬೆಳಗ್ಗೆ 9 ಗಂಟೆಗೆ ಪ್ರಯಾಣಕ್ಕೆ ಉಪ್ಪಿನಂಗಡಿಯಿಂದ ಚಾಲನೆ ನೀಡಲಾಗುತ್ತದೆ. ಅದರಲ್ಲೂ ಹಾಸನದಿಂದ ನೆಲಮಂಗಲದ ತನಕ ಭವ್ಯ ಮೆರವಣಿಗೆಯಲ್ಲಿ ಕೋಣಗಳನ್ನು ಕರೆದೊಯ್ಯಲಾಗುತ್ತದೆ. ಈ ಎಲ್ಲ ಕೋಣಗಳು ಲಾರಿಗಳಲ್ಲಿ ತೆರಳಲಿವೆ. ಕೋಣಗಳನ್ನು ಲಾರಿಯಲ್ಲಿ ಬ್ಯಾಂಡ್, ವಾದ್ಯಗಳ ಮೂಲಕ ತೆರಳುತ್ತವೆ. ಕೋಣಗಳಿಗೆ ಕುಡಿಯುವ ನೀರು ವ್ಯತ್ಯಾಸವಾದರೆ ಸಮಸ್ಯೆಯಾಗಬಹುದು ಎಂಬ ಕಾರಣಕ್ಕಾಗಿ ಆಯಾ ಮಾಲಕರು ತಮ್ಮ ಕೋಣಗಳಿಗೆ ಬೇಕಾದ ಕುಡಿಯುವ ನೀರು, ಆಹಾರವನ್ನು ಊರಿನಿಂದಲೇ ತರಲಿದ್ದಾರೆ. ಜತೆಗೆ ಪಶು ವೈದ್ಯರ ತಂಡವೂ ಇರಲಿದೆ. ಆಯಾ ತಾಲೂಕಿನಲ್ಲಿ ಸ್ವಾಗತ ಕಾರ್ಯಕ್ರಮ, ವಿಶ್ರಾಂತಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ನ.24ಕ್ಕೆ ಅರಮನೆ ಆವರಣದಲ್ಲಿ ಕಂಬಳಕ್ಕೆ ಕೋಣಗಳಿಗೆ ಸ್ವಾಗತವನ್ನೂ ಕೋರಲಾಗುವುದು ಎಂದು ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ ಮಾಹಿತಿ ನೀಡಿದರು.

ಗಣ್ಯರ ಆಗಮನ: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್, ಜೆಡಿಎಸ್ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ನಟಿ ಅನುಷ್ಕಾ ಶೆಟ್ಟಿ, ಕ್ರಿಕೆಟಿಗ ಕೆ.ಎಲ್.ರಾಹುಲ್, ನಟರಾದ ಶಿವರಾಜ್ ಕುಮಾರ್, ದರ್ಶನ್, ಸುದೀಪ್ ಸೇರಿದಂತೆ ನಟ-ನಟಿಯರು ಹಾಗೂ ರಾಜಕೀಯ ಗಣ್ಯರು, ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಸಮಿತಿ ತಿಳಿಸಿದೆ.

ನ.24ಕ್ಕೆ ತುಳಕೂಟದ ಬಂಗಾರ್ದ ಪರ್ಬ: ನ.24ರಂದು ಅರಮನೆ ಮೈದಾನದಲ್ಲಿ ತುಳುಕೂಟ ಬೆಂಗಳೂರು 50ರ ಸಂಭ್ರಮದ ಅಂಗವಾಗಿ `ಬಂಗಾರ್ದ ಪರ್ಬ' ವಿಶ್ವ ತುಳು ಸಾಹಿತ್ಯ ಮತ್ತು ಸಾಂಸ್ಕತಿಕ ಸಮ್ಮೇಳನವನ್ನು ನಡೆಸಲಾಗುವುದು. ಈ ಸಮ್ಮೇಳನವನ್ನು ಅಂದು ಬೆಳಗ್ಗೆ 11ಕ್ಕೆ ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಡೆ ಉದ್ಘಾಟಿಸಲಿದ್ದಾರೆ. ನಂತರ ಸಮ್ಮೇಳನ ಆರಂಭವಾಗಲಿದೆ. ಸಂಜೆ 5.30ಕ್ಕೆ ಸಭಾ ಕಾರ್ಯಕ್ರಮ ಮತ್ತು ಸಾಂಸ್ಕತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತುಳುಕೂಟದ ಗೌರವಾಧ್ಯಕ್ಷ ಕೆ.ವಿ.ರಾಜೇಂದ್ರಕುಮಾರ್ ತಿಳಿಸಿದರು.

ಗೊಂದಲಗಳು ಸಹಜ: ಇದೊಂದು ದೊಡ್ಡ ಕಾರ್ಯಕ್ರಮವಾಗಿದ್ದು, ಯಾವುದೇ ಅಡೆತಡೆಗಳಿಲ್ಲದೆ ನಡೆಸುವ ಉದ್ದೇಶದಿಂದ 35 ಸಮಿತಿಗಳನ್ನು ಮಾಡಲಾಗಿದ್ದು, ಅದರಲ್ಲಿ 1,400 ಮಂದಿ ಸದಸ್ಯರಿದ್ದಾರೆ. ಬೇರೆ ಬೇರೆ ಸಂಘಟನೆಯವರು ಬಂದು ಅನೇಕ ಮನವಿ ಮಾಡುತ್ತಾರೆ. ಬ್ರಿಜ್ ಭೂಷಣ್ ಶರಣ್ ಸಿಂಗ್ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಸಣ್ಣ ಪುಟ್ಟ ಗೊಂದಲಗಳಿರುತ್ತವೆ. ಇದನ್ನು ಇಟ್ಟುಕೊಂಡು ವಿವಾದ ಮಾಡುವುದು ಬೇಡ ಎಂದು ಅಶೋಕ್ ರೈ ಮನವಿ ಮಾಡಿದರು.

ವೇದಿಕೆಗೆ ನಟ ಪುನೀತ್ ಹೆಸರು: ಇನ್ನು ಕಂಬಳ ವೇದಿಕೆಗೆ ನಟ ಪುನೀತ್ ರಾಜ್ ಕುಮಾರ್ ಹೆಸರು ಇಡಲು ತೀರ್ಮಾನ ಮಾಡಲಾಗಿದೆ. ಕಂಬಳ ಕೋಣಗಳು ಓಡುವ ಟ್ರಾಕ್‌ ಗೆ ರಾಜ ಮಹಾರಾಜ ಕರೆ ಎಂದು ಹೆಸರು ಇಡಲಾಗಿದೆ. ಸಾಂಸ್ಕತಿಕ ವೇದಿಕೆಗೆ ಕೃಷ್ಣರಾಜ ಒಡೆಯರ್ ಹೆಸರು ಇಡಲಾಗಿದೆ ಎಂದು ಅಶೋಕ್ ರೈ ತಿಳಿಸಿದರು.

ಭೂಷಣ್, ಶ್ಯಾಮ್ ಕಿಶೋರ್ ಬರುತ್ತಿಲ್ಲ: ಕಂಬಳಕ್ಕೆ ಮುಖ್ಯ ಅತಿಥಿಗಳಾಗಿ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಕೊಟ್ಟ ಆರೋಪ ಎದುರಿಸುತ್ತಿರುವ ಸಂಸದ ಬ್ರಿಜ್ ಭೂಷಣ್ ಅವರನ್ನು ಆಹ್ವಾನಿಸಲಾಗಿತ್ತು. ಆದರೆ, ವಿರೋಧದ ಹಿನ್ನೆಲೆಯಲ್ಲಿ ಇದೀಗ ಅವರ ಹೆಸರನ್ನು ಅಧಿಕೃತವಾಗಿ ಕೈಬಿಡಲಾಗಿದೆ. ಜೊತೆಗೆ ಮುಂಬೈ ಸರಣಿ ಬಾಂಬ್ ಸ್ಫೋಟದ ಅಪರಾಧಿ ಶ್ಯಾಮ್ ಕಿಶೋರ್ ಗರಿಕಪಟ್ಟಿ ಅವರ ಹೆಸರನ್ನೂ ಕೈಬಿಡಲಾಗಿದೆ ಎಂದು ಅಶೋಕ್ ರೈ ಸ್ಪಷ್ಠಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News