ಬೆಂಗಳೂರು | ಸಾಕುನಾಯಿಯನ್ನು ಕಾರಿನಲ್ಲಿಯೇ ಬಿಟ್ಟು ವಿಮಾನದಲ್ಲಿ ತೆರಳಿದ ವ್ಯಕ್ತಿ: ಮುಂದೇನಾಯ್ತು?

Update: 2023-08-09 18:15 GMT

ಬೆಂಗಳೂರು, ಆ.9: ವ್ಯಕ್ತಿಯೊಬ್ಬರು ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್‌ನಲ್ಲಿ ಕಾರಿನಲ್ಲಿಯೇ ಸಾಕುನಾಯಿ ಬಿಟ್ಟು ಲಾಕ್ ಮಾಡಿಕೊಂಡು ವಿಮಾನದಲ್ಲಿ ಕೊಯಮತ್ತೂರಿಗೆ ಹೋಗಿರುವ ಘಟನೆಯೊಂದು ವರದಿಯಾಗಿದೆ.

ಬೆಂಗಳೂರಿನ ಕಲ್ಯಾಣ ನಗರದ ನಿವಾಸಿ ವಿಕ್ರಮ್ ರಾಮದಾಸ್ ಲಿಂಗೇಶ್ವರ್(41) ಎಂಬುವರು ತನ್ನ ಗ್ರೇಟ್ ಡೇನ್ ತಳಿಯ ದೈತ್ಯ ನಾಯಿಯನ್ನು ಕಾರಿನಲ್ಲಿರಿಸಿ ಗಾಜು ಹಾಕಿ, ಲಾಕ್ ಮಾಡಿ ಬಿಟ್ಟು ಹೋಗಿದ್ದಾರೆ.  

ಇದರಿಂದ ಉಸಿರಾಡಲು ಗಾಳಿ ಇಲ್ಲದೆ ನಾಯಿ ತೀವ್ರವಾಗಿ ನಿತ್ರಾಣಗೊಂಡಿತ್ತು. ಸುಮಾರು ಮೂರು ಗಂಟೆಗಳ ಕಾಲ ಆಮ್ಲಜನಕ ಕೊರತೆಯಿಂದ ನಾಯಿಯ ಮೂಗಿನಲ್ಲಿ ರಕ್ತ ಸ್ರಾವವಾಗುತಿತ್ತು. ಗಸ್ತಿನಲ್ಲಿದ್ದ ಸಿಐಎಸ್‌ಎಫ್ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಕಾರಿನಲ್ಲಿ ನಾಯಿ ಬೊಗಳುತ್ತಿರುವುದನ್ನು ಗಮನಿಸಿ ಕಿಟಕಿಯ ಗಾಜು ಒಡೆದು ನಾಯಿಯನ್ನು ರಕ್ಷಿಸಿದ್ದಾರೆ ಎಂದು ಗೊತ್ತಾಗಿದೆ.

ಪ್ರಾಣಿಗಳ ರಕ್ಷಣೆಯಲ್ಲಿ ತೊಡಗಿರುವ ಚಾರ್ಲಿ ಎಂಬ ಸ್ವಯಂ ಸೇವಾ ಸಂಸ್ಥೆ ಸಂಪರ್ಕಿಸಿ ಚಿಕಿತ್ಸೆಗೆ ಆ ಸಾಕುನಾಯಿಯನ್ನು ಕಳಿಸಲಾಗಿದೆ. ಆ.7ರಂದು ರಾತ್ರಿ 9 ಗಂಟೆಗೆ ಕೊಯಮತ್ತೂರಿನಿಂದ ಮರಳಿ ಬಂದ ವಿಕ್ರಮ್ ರಾಮದಾಸ್ ಲಿಂಗೇಶ್ವರ್ ಅವರನ್ನು ವಶಕ್ಕೆ ಪಡೆದು, ವಿಮಾನ ನಿಲ್ದಾಣದ ಪೊಲೀಸರಿಗೆ ಒಪ್ಪಿಸಲಾಗಿದೆ. ನಾಯಿ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ. ನಂತರ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News