ಬೆಂಗಳೂರು | 7 ವರ್ಷಗಳಿಂದ ಸ್ಥಗಿತಗೊಂಡ ಹೆರಿಗೆ ಆಸ್ಪತ್ರೆ; ಗರ್ಭಿಣಿಯರ ಅಲೆದಾಟ
ಬೆಂಗಳೂರು, ಅ.20: ರಾಜಧಾನಿ ಬೆಂಗಳೂರಿನ ಯಶವಂತಪುರದ ರೈಲ್ವೆ ನಿಲ್ದಾಣದ ಬಳಿಯ ಕೇಂದ್ರ ಭಾಗದಲ್ಲಿ 1975ರಲ್ಲಿ ಆರಂಭಗೊಂಡು ಬಡವರಿಗೆ ಕೈಗೆಟಕುವ ದರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸರಕಾರಿ ಹೆರಿಗೆ ಆಸ್ಪತ್ರೆಯನ್ನು 2016ರಿಂದ ಸ್ಥಗಿತಗೊಳಿಸಲಾಗಿದ್ದು, ಬಡ ಕೂಲಿ ಕಾರ್ಮಿಕ ಮಹಿಳೆಯರು ಹೆರಿಗೆಗೆಂದು ಅಲೆದಾಟುವ ಸ್ಥಿತಿ ನಿರ್ಮಾಣವಾಗಿದೆ.
ಇನ್ನೆರಡು ವರ್ಷಗಳಲ್ಲಿ ಸುವರ್ಣ ಹಬ್ಬವನ್ನು ಆಚರಿಸಬೇಕಿದ್ದ ಆಸ್ಪತ್ರೆಯು 2016ರಲ್ಲಿ ಮಳೆ ನೀರಿನ ಸೋರಿಕೆಯ ಕಾರಣ ರಿಪೇರಿಗೆಂದು ಮುಚ್ಚಲ್ಪಟ್ಟಿತು. 2019-20ರಲ್ಲಿ ಈ ಆಸ್ಪತ್ರೆಯನ್ನು ದುರಸ್ಥಿಗೊಳಿಸಿ ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಲಾಯಿತು. ಅನಂತರದಲ್ಲಿ ಇಲ್ಲಿಯ ವರೆಗೆ ಇದು ಹೆರಿಗೆ ಆಸ್ಪತ್ರೆಯಾಗಿ ಕೆಲಸ ನಿರ್ವಹಿಸಲೇ ಇಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.
ಯಶವಂತಪುರ, ಪೀಣ್ಯ, ಪೀಣ್ಯ ಇಂಡಸ್ಟ್ರೀ, ದಾಸರಹಳ್ಳಿ, ಮತ್ತಿಕೆರೆ, ಜಾಲಹಳ್ಳಿ, ಜಾಲಹಳ್ಳಿ ಕ್ರಾಸ್ ಸೇರಿದಂತೆ ಹಲವಾರು ಬಡಾವಣೆಗಳ ಬಡಕೂಲಿ ಕಾರ್ಮಿಕ ಮಹಿಳೆಯರು, ಕೆಳಮಧ್ಯಮ ವರ್ಗದ ಮಹಿಳೆಯರು ಈ ಹೆರಿಗೆ ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದರು. ಈ ಆಸ್ಪತ್ರೆಯಲ್ಲಿ ಪ್ರತಿ ತಿಂಗಳಿಗೆ ಸುಮಾರು 250ರಿಂದ 300 ಹೆರಿಗೆಗಳಾಗುತ್ತಿದ್ದವು. ಆದರೆ ಇದೀಗ ಈ ಆಸ್ಪತ್ರೆ ಮುಚ್ಚಿ ಹೋಗಿರುವುದರಿಂದ ಸಾವಿರಾರು ಹೆಣ್ಣು ಮಕ್ಕಳು ಆಸ್ಪತ್ರೆ ಹುಡುಕಿಕೊಂಡು ಅಲೆದಾಡುವಂತಾಗಿದೆ.
ಯಶವಂತಪುರ ಭಾಗದಲ್ಲಿನ ನೂರಾರು ಮಹಿಳೆಯರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮನೆಯ ಹತ್ತಿರವಿರುವ ಖಾಸಗಿ ಆಸ್ಪತ್ರೆಯಲ್ಲಿ ಸೇರಿಸಿ ದುಪ್ಪಟ್ಟು ವೆಚ್ಚವನ್ನು ಭರಿಸಬೇಕಾಗುವ ಅನಿವಾರ್ಯತೆಯೂ ಉಂಟಾಗಿದೆ. ಅಲ್ಲದೆ, ಶ್ರೀರಾಂಪುರ ಹೆರಿಗೆ ಆಸ್ಪತ್ರೆ, ಕೆ.ಸಿ.ಜನರಲ್ ಆಸ್ಪತ್ರೆ, ವಾಣಿ ವಿಲಾಸ್ ಆಸ್ಪತ್ರೆ ಹೀಗೆ ದೂರದ ಸರಕಾರಿ ಆಸ್ಪತ್ರೆಗಳನ್ನು ಹುಡುಕಿಕೊಂಡು ಹೋಗುವ ದುರ್ಗತಿ ಉಂಟಾಗಿದೆ ಎನ್ನುತ್ತಾರೆ ಅಖಿಲ ಭಾರತ ಮಹಿಳಾ ಸಾಂಸ್ಕøತಿಕ ಸಂಘಟನೆ(ಎಐಎಂಎಸ್‍ಎಸ್)ಯ ರಾಜ್ಯ ಕಾರ್ಯದರ್ಶಿ ಶೋಭಾ ಎಸ್.
2019-20ರಲ್ಲಿ ಕೋವಿಡ್ ಆಸ್ಪತ್ರೆಯಾಗಿ ಹೆಸರನ್ನು ಬದಲಿಸಿಕೊಂಡ ಈ ಆಸ್ಪತ್ರೆಯು ಭರ್ಜರಿಯಾಗಿ ಉದ್ಘಾಟನೆ ಆಗಿದ್ದು ಬಿಟ್ಟರೆ, ಕೋವಿಡ್‍ನಲ್ಲೂ ಸಕ್ರಿಯವಾಗಿ ನಿರ್ವಹಿಸಲಿಲ್ಲ, ನಂತರ ಸಂಪೂರ್ಣವಾಗಿ ಆಸ್ಪತ್ರೆಗೆ ಬೀಗ ಜಡಿಯಲಾಯಿತು. ಕೋವಿಡ್ ನಂತರವೂ ಹೆರಿಗೆ ಆಸ್ಪತ್ರೆಯಾಗಿ ಕೆಲಸ ಮಾಡಲೇ ಇಲ್ಲ. ಈ ಆಸ್ಪತ್ರೆ ಬಡ ಹಾಗೂ ಸಾಮಾನ್ಯರಿಗೆ ಅನಿವಾರ್ಯವಾಗಿದೆ ಎನ್ನುತ್ತಾರೆ ಯಶವಂತಪುರದ ಮಹಿಳೆ ಸರಸ್ವತಮ್ಮ.
ಆರೋಗ್ಯ ಇಲಾಖೆ, ಸ್ಥಳೀಯ ಆಡಳಿತ ಸ್ಪಂದಿಸುತ್ತಿಲ್ಲ: ಸತತ ನಾಲ್ಕೈದು ವರ್ಷಗಳಿಂದಲೂ ಹೆರಿಗೆ ಆಸ್ಪತ್ರೆಯನ್ನು ಪುನರಾರಂಭಿಸುವಂತೆ ಸ್ಥಳೀಯ ಶಾಸಕರು, ಬಿಬಿಎಂಪಿ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಗೂ ವಿವಿಧ ಸಂಘ ಸಂಸ್ಥೆಗಳು ಸಾಲು ಸಾಲು ಮನವಿಗಳನ್ನು ಸಲ್ಲಿಸಿದರೂ ಈವರೆಗೆ ಯಾರೊಬ್ಬರೂ ಸ್ಪಂದಿಸಿಲ್ಲ. ಎಲ್ಲರೂ ಆರಿಕೆಯ ಉತ್ತರಗಳನ್ನು ಹೇಳಿ ಕಳುಹಿಸುತ್ತಾರೆ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಮಹೇಶ್ ತಿಪ್ಪಶೆಟ್ಟಿ.
ಸಂಸದ ಡಿ.ಕೆ.ಸುರೇಶ್‍ಗೆ ಮನವಿ..
ಕೋವಿಡ್ ನಂತರದಲ್ಲಿ ಆರೋಗ್ಯ ಕ್ಷೇತ್ರವು ದುಬಾರಿಯಾಗಿರುವುದರಿಂದ ಈ ಆಸ್ಪತ್ರೆ ಬಡ ಹಾಗೂ ಸಾಮಾನ್ಯರಿಗೆ ಅನಿವಾರ್ಯವಾಗಿದೆ. ಹಾಗಾಗಿ ಮತ್ತೆ ಈ ಆಸ್ಪತ್ರೆಯನ್ನು ಕೂಡಲೇ ಪ್ರಾರಂಭಿಸುವಂತೆ ಅಖಿಲ ಭಾರತ ಮಹಿಳಾ ಸಾಂಸ್ಕøತಿಕ ಸಂಘಟನೆಯ ರಾಜ್ಯ ಸಮಿತಿಯ ನಿಯೋಗವು ಸ್ಥಳೀಯ ಮಹಿಳೆಯರೊಂದಿಗೆ ಸಂಸದ ಡಿ.ಕೆ.ಸುರೇಶ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ʼʼಈಗಲೂ ಪ್ರತಿದಿನ 30-40 ಮಹಿಳೆಯರು ನಿರಾಸೆಗೊಂಡು ವಾಪಸ್ಸಾಗುತ್ತಾರೆʼʼ
ʼಇಲ್ಲಿನ ಮಹಿಳೆಯರು ದೂರದ ಸರಕಾರಿ ಹೆರಿಗೆ ಆಸ್ಪತ್ರೆಯನ್ನು ತಲುಪುವುದರಲ್ಲಿ ಸಾಕಷ್ಟು ಅನಾಹುತಗಳು ಎದುರಾಗುತ್ತಿವೆ. ಈ ಹಿಂದೆ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಆಸ್ಪತ್ರೆಗೆ ಹೋಗುವ ಮಾರ್ಗಮಧ್ಯದಲ್ಲೇ ತಗ್ಗಿದ ರಕ್ತದೊತ್ತಡದಿಂದ ತನ್ನ ಮಗುವನ್ನು ಕಳೆದುಕೊಂಡದ್ದರು. ಅಲ್ಲದೆ, ಮಗುವನ್ನು ಕಳೆದುಕೊಂಡ ಮತ್ತೊರ್ವ ಮಹಿಳೆ ಮಾನಸಿಕವಾಗಿ ಅಸ್ವಸ್ಥವಾಗಿರುವ ನಿದರ್ಶನವೂ ಇದೆ. ಈಗಲೂ ಪ್ರತಿದಿನ 30ರಿಂದ 40 ಮಹಿಳೆಯರು ಇಲ್ಲಿ ಹೆರಿಗೆ ಆಸ್ಪತ್ರೆ ಇರುವುದಾಗಿ ಬಂದು, ಇಲ್ಲವೆಂದು ನಿರಾಸೆಯಾಗಿ ಹಿಂತಿರುಗುತ್ತಿದ್ದಾರೆʼ
-ನಿರ್ಮಲಾ ಎಚ್.ಎಲ್., ಉಪಾಧ್ಯಕ್ಷೆ ಎಐಎಂಎಸ್‍ಎಸ್ ಬೆಂಗಳೂರು.