ಬೆಂಗಳೂರು | 5ಕೋಟಿ ರೂ.ಮೌಲ್ಯದ ನಿಷೇಧಿತ ಮಾದಕ ವಸ್ತು ವಶ; 10 ಮಂದಿ ಆರೋಪಿಗಳ ಬಂಧನ
ಬೆಂಗಳೂರು, ಅ.27: ಬೆಂಗಳೂರು ಸಿಸಿಬಿಯ ಮಾದಕ ವಸ್ತು ನಿಗ್ರಹ ದಳದ ಪೊಲೀಸರು, ಹದಿನೈದು ದಿನಗಳ ಅವಧಿಯಲ್ಲಿ ನಗರದಾದ್ಯಂತ 10 ಮಂದಿ ಆರೋಪಿಗಳನ್ನು ಬಂಧಿಸಿ 5.04 ಕೋಟಿ ರೂ. ಮೌಲ್ಯದ ವಿವಿಧ ನಿಷೇಧಿತ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನಗರದ ಕಾಡುಗೋಡಿ, ಕೆ.ಆರ್.ಪುರಂ, ಸೋಲದೇವನಹಳ್ಳಿ, ಎಚ್‍ಎಸ್‍ಆರ್ ಲೇಔಟ್, ವೈಟ್‍ಫೀಲ್ಡ್, ಬಾಣಸವಾಡಿ ಹಾಗೂ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡು 8 ಜನ ವಿದೇಶಿ ಡ್ರಗ್ ಪೆಡ್ಲರ್ ಗಳ ಸಹಿತ ಒಟ್ಟು 10 ಮಂದಿಯನ್ನು ಬಂಧಿಸಿ ಕ್ರಮ ಜರುಗಿಸಿದ್ದಾರೆ.
ಬಹುತೇಕ ಆರೋಪಿಗಳು ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಗಳಿಸುವ ಉದ್ದೇಶದಿಂದ ಡ್ರಗ್ ದಂಧೆಯಲ್ಲಿ ತೊಡಗಿದ್ದು, ನಿಷೇಧಿತ ಮಾದಕ ಪದಾರ್ಥಗಳನ್ನು ಕಡಿಮೆ ಬೆಲೆಗೆ ಆಮದು ಮಾಡಿಕೊಂಡು ಅವುಗಳನ್ನು ಕಾಲೇಜು ವಿದ್ಯಾರ್ಥಿಗಳು, ಐಟಿ-ಬಿಟಿ ಕಂಪೆನಿಯ ಉದ್ಯೋಗಿಗಳು, ಪರಿಚಯಸ್ಥರಿಗೆ ಮಾರಾಟ ಮಾಡುತ್ತಿದ್ದರು ಎನ್ನುವುದು ಸಿಸಿಬಿ ಪೊಲೀಸರ ತನಿಖೆಯಿಂದ ಬಯಲಾಗಿದೆ.
ಬಂಧಿತರ ಬಳಿ 3.806 ಕೆಜಿ ಎಂಡಿಎಂಎ ಕ್ರಿಸ್ಟಲ್ಸ್, 50 ಗ್ರಾಂ ಕೊಕೇನ್, 25 ಎಕ್ಸ್ಟ್ಟಸಿ ಪಿಲ್ಸ್, 50 ಎಲ್‍ಎಸ್‍ಡಿ ಸ್ಟ್ರಿಪ್ಸ್, 5.1 ಕೆಜಿ ಗಾಂಜಾ, 1 ಕಾರು, 3 ದ್ವಿಚಕ್ರ ವಾಹನಗಳು, 9 ಮೊಬೈಲ್ ಫೋನ್‍ಗಳು ಮತ್ತಿತರ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ. ಬಂಧಿತರ ವಿರುದ್ಧ ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಮಾದಕ ವಸ್ತು ನಿಗ್ರಹ ದಳದ ಪೊಲೀಸರು ಮಾಹಿತಿ ನೀಡಿದ್ದಾರೆ.