ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧದ ದೌರ್ಜನ್ಯದ ವಿರುದ್ಧ ಕ್ರಮ ಕೈಗೊಳ್ಳಿ : ಪ್ರಧಾನಿಗೆ ಶಾಸಕ ರಿಝ್ವಾನ್ ಅರ್ಷದ್ ಪತ್ರ

Update: 2024-08-14 13:14 GMT

 ರಿಝ್ವಾನ್ ಅರ್ಷದ್ ,  ಪ್ರಧಾನಿ ನರೇಂದ್ರ ಮೋದಿ | PTI 

ಬೆಂಗಳೂರು : ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ವಿರುದ್ಧ ದಾಳಿ ನಡೆಯುತ್ತಿದೆ ಎಂದಾದರೆ ಆ ದೌರ್ಜನ್ಯದ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಾಂಗ್ರೆಸ್ ಶಾಸಕ ರಿಝ್ವಾನ್ ಅರ್ಷದ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.

ಭಾರತದ ಜನರು ಯಾವಾಗಲೂ ನ್ಯಾಯ, ಶಾಂತಿ ಮತ್ತು ಮಾನವ ಹಕ್ಕುಗಳ ರಕ್ಷಣೆಗಾಗಿ ನಿಂತಿದ್ದಾರೆ. ನಮ್ಮ ಪ್ರಧಾನಿ ಇಂದಿರಾ ಗಾಂಧಿ 1971 ರಲ್ಲಿ ಕೈಗೊಂಡ ಮಿಲಿಟರಿ ಕ್ರಮದಂತಹ ಕ್ರಮ ಈಗ ತೆಗೆದುಕೊಳ್ಳಲು ನೀವು ಹಿಂಜರಿಯಬಾರದು. ಬಾಂಗ್ಲಾದೇಶದಲ್ಲಿರುವ ನಮ್ಮ ಹಿಂದೂ ಸಹೋದರ ಸಹೋದರಿಯರಿಗೆ ಬೆಂಬಲದ ಹಸ್ತವನ್ನು ಚಾಚಲು ತಮ್ಮ ಅಧಿಕಾರ ಹಾಗು ಪ್ರಭಾವವನ್ನು ಬಳಸಬೇಕು ಎಂದು ರಿಝ್ವಾನ್ ಅರ್ಷದ್ ಪ್ರಧಾನಿ ಮೋದಿಯವರನ್ನು ಆಗ್ರಹಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ರಾಜಕೀಯ ಪ್ರಕ್ಷುಬ್ಧತೆ ಮತ್ತು ಹಿಂದೂ ಅಲ್ಪಸಂಖ್ಯಾತರ ವಿರುದ್ಧ ವರದಿಯಾಗುತ್ತಿರುವ ದೌರ್ಜನ್ಯಗಳನ್ನು ತೋರಿಸುವ ಇತ್ತೀಚಿನ ವರದಿಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿವೆ. ಈ ವರದಿಗಳು ಮತ್ತು ವೀಡಿಯೋಗಳಿಂದ ತೀವ್ರವಾಗಿ ನಾನು ನೊಂದಿದ್ದೇನೆ . ಇದು ಹೌದು ಎಂದಾದರೆ, ಭಾರತ ಹಾಗು ಬಾಂಗ್ಲಾ ನಡುವೆ ಇರುವ ಐತಿಹಾಸಿಕ ಹಾಗು ಸಾಂಸ್ಕೃತಿಕ ನಂಟಿನ ಹಿನ್ನೆಲೆಯಲ್ಲಿ ಭಾರತ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಬಾಂಗ್ಲಾದೇಶದಲ್ಲಿರುವ ಹಿಂದೂ ಅಲ್ಪಸಂಖ್ಯಾತರ ಸುರಕ್ಷತೆ ಅತ್ಯಂತ ಮುಖ್ಯವಾದುದು. ಅವರ ಹಕ್ಕುಗಳು ಮತ್ತು ಘನತೆಯನ್ನು ಕಾಪಾಡಲು ತ್ವರಿತ ಮತ್ತು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬುದನ್ನು ಬಾಂಗ್ಲಾದೇಶದ ನೂತನ ಸರಕಾರದೊಂದಿಗೆ ಭಾರತ ಸರಕಾರವು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಭಾರತದಲ್ಲಿ ಬಲಪಂಥೀಯ ಸಾಮಾಜಿಕ ಮಾಧ್ಯಮದಲ್ಲಿ ಬಾಂಗ್ಲಾ ಹಿಂಸಾಚಾರ ಕುರಿತ ಸುದ್ದಿಗಳು, ವೀಡಿಯೊಗಳು ಪ್ರಸಾರವಾಗುತ್ತಿವೆ. ಅವುಗಳಲ್ಲಿ ಹಲವು ನಕಲಿ ಎಂದು ಕಂಡುಬಂದಿವೆ. ಅವುಗಳ ಸತ್ಯಾಸತ್ಯೆತೆಯನ್ನು ಭಾರತ ಸರಕಾರವು ಖಚಿತಪಡಿಸಿಕೊಳ್ಳಬೇಕು ಹಾಗು ಅದು ಹೌದು ಎಂದಾದರೆ ಸೂಕ್ತ ಕ್ರಮ ಕೈಗೊಳ್ಳಲು ಭಾರತ ಸರಕಾರ ಹಿಂಜರಿಯಬಾರದು ಎಂದು ರಿಜ್ವಾನ್ ಅರ್ಷದ್ ಒತ್ತಾಯಿಸಿದ್ದಾರೆ.

ಭಾರತವು ಬಾಂಗ್ಲಾದೇಶದ ಅಲ್ಪಸಂಖ್ಯಾತರ ಕಳವಳಗಳನ್ನು ಪರಿಹರಿಸಲು ನಿರ್ಣಾಯಕ ಕ್ರಮವನ್ನು ತೆಗೆದುಕೊಳ್ಳುವ ಭರವಸೆಯಿದೆ. ಅದರೊಂದಿಗೆ ಬಲಪಂಥೀಯರಿಂದ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ನಿರಂತರ ದಾಳಿಗೆ ಅಲ್ಪಸಂಖ್ಯಾತರು ಒಳಗಾಗಿರುವ ಭಾರತದಲ್ಲಿಯೂ ರಕ್ಷಣೆ ಮಾಡಬೇಕಾದ ಅಗತ್ಯವಿದೆ ಎಂದು ರಿಜ್ವಾನ್ ಅವರು ಪ್ರತಿಪಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News