ಬನ್ನೇರುಘಟ್ಟ ಉದ್ಯಾನವನ: ಚಿರತೆ ಬಳಿಕ ಈಗ 13 ಜಿಂಕೆ ನಿಗೂಢವಾಗಿ ಸಾವು
ಆನೇಕಲ್ (ಬೆಂಗಳೂರು ಗ್ರಾಮಾಂತರ): ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಒಂದು ವಾರದಲ್ಲಿ ಸುಮಾರು 13 ಜಿಂಕೆಗಳು ಮೃತಪಟ್ಟಿರುವುದು ವರದಿಯಾಗಿದೆ.
ಕೆಲ ದಿನಗಳ ಹಿಂದೆಯಷ್ಟೆ ಸೋಂಕಿಗೆ ತುತ್ತಾಗಿದ್ದ ಏಳು ಚಿರತೆಗಳು ರಕ್ತಭೇದಿಯಿಂದ ಸಾವನ್ನಪ್ಪಿದ್ದವು. ಅದರ ಮುಂದುವರಿದ ಭಾಗವಾಗಿ ಜಿಂಕೆಗಳು ಸಾವನ್ನಪ್ಪಿರುವುದು ಅನುಮಾನ ಮೂಡಿಸಿದೆ.
ʼʼಜಿಂಕೆಗಳು ಅತ್ಯಂತ ಸೂಕ್ಷ್ಮ ಜೀವಿಗಳಾಗಿದ್ದು, ಒಂದು ಕಡೆಯಿಂದ ಮತ್ತೊಂದು ಪ್ರದೇಶಕ್ಕೆ ಸಾಗಾಟ ಮಾಡುವ ಸಂದರ್ಭದಲ್ಲಿ ರೋಗರುಜಿನಗಳಿಗೆ ತುತ್ತಾಗುವ ಅಪಾಯ ಇರುತ್ತದೆ. ಹಾಗಾಗಿ ಸೆಂಟ್ ಜಾನ್ ಆಸ್ಪತ್ರೆಯ ಉದ್ಯಾನವನದಲ್ಲಿ ಸಾಕಲಾಗಿದ್ದ 28 ಜಿಂಕೆಗಳನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗಿತ್ತು. ಈ ಪೈಕಿ 13 ಜಿಂಕೆಗಳು ಸಾವನ್ನಪ್ಪಿವೆʼʼ ಎಂದು ಉದ್ಯಾನವನದ ಕಾರ್ಯನಿರ್ವಹಕ ಅಧಿಕಾರಿ ಸೂರ್ಯಸೇನ್ ಮಾಹಿತಿ ನೀಡಿದ್ದಾರೆ.
ʼʼಜಿಂಕೆಗಳಿಗೆ ಓಡಾಡಲು ಸಾಕಷ್ಟು ವಿಶಾಲವಾದ ಜಾಗ ಬೇಕಾಗುತ್ತದೆ. ಸೇಂಟ್ ಜಾನ್ಸ್ ಆಸ್ಪತ್ರೆ ಉದ್ಯಾನದ ಕಿರಿದಾದ ಜಾಗದಲ್ಲಿದ್ದ ಕಾರಣ ಆರೈಕೆ ಕಷ್ಟವಾಗಿತ್ತು. ಹಾಗಾಗಿ ಎಲ್ಲವನ್ನೂ ಉದ್ಯಾನಕ್ಕೆ ಹಸ್ತಾಂತರಿಸಲಾಗಿತ್ತುʼʼ ಎಂದು ಡಿಸಿಎಫ್ ಪ್ರಭಾಕರ್ ತಿಳಿಸಿದರು.
ʼʼಕೆಲವು ಜಿಂಕೆಗಳು ಜಂತುಹುಳ ಬಾಧೆಯಿಂದ ಸಾವನ್ನಪ್ಪಿರುವುದು ಗೊತ್ತಾಗಿವೆ. ಕೆಲವು ಜಿಂಕೆಗಳ ಸಾವಿಗೆ ನಿಖರವಾದ ಕಾರಣ ತಿಳುದುಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆʼʼ
- ಸೂರ್ಯಸೇನ್-ಬನ್ನೇರುಘಟ್ಟ ಉದ್ಯಾನವನದ ಕಾರ್ಯನಿರ್ವಹಕ ಅಧಿಕಾರಿ