ಬಿಜೆಪಿ ನಾಯಕ ಬಿ ಎಸ್ ಯಡಿಯೂರಪ್ಪ ಪ್ರಕರಣಗಳಲ್ಲಿ ಪಕ್ಷಪಾತದ ನಿಲುವು : ಸಿಜೆಐ ಸಂಜೀವ್ ಖನ್ನಾರಿಗೆ ಪತ್ರ ಬರೆದ ವಕೀಲ ಸಚಿನ್ ದೇಶಪಾಂಡೆ
ಬೆಂಗಳೂರು : ಬಿಜೆಪಿ ನಾಯಕ ಬಿ ಎಸ್ ಯಡಿಯೂರಪ್ಪ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ತೆಗೆದುಕೊಂಡಿರುವ ಪಕ್ಷಪಾತದ ನಿಲುವಿನ ಬಗ್ಗೆ ಮಧ್ಯಪ್ರವೇಶಿಸುವಂತೆ ಸಿಜೆಐ ಸಂಜೀವ್ ಖನ್ನಾರಿಗೆ ಬೆಂಗಳೂರಿನ ವಕೀಲ ಸಚಿನ್ ದೇಶಪಾಂಡೆ ಅವರು ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ.
ಭ್ರಷ್ಟಾಚಾರ ಪ್ರಕರಣಗಳಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಅವರ ಪರವಾಗಿ ಸುಪ್ರೀಂ ಕೋರ್ಟ್ ಪಕ್ಷಪಾತದ ನಿಲುವು ತೆಗೆದುಕೊಂಡಿದೆ ಎಂದು ಆರೋಪಿಸಿರುವ ಅವರು, ಈ ಪ್ರಕರಣದಲ್ಲಿ ಸಾರ್ವಜನಿಕ ನಂಬಿಕೆ ಉಳಿಸಲು ಮತ್ತು ನ್ಯಾಯಾಂಗ ನಿಷ್ಪಕ್ಷಪಾತತೆ ಎತ್ತಿ ಹಿಡಿಯಲು ಮಧ್ಯಪ್ರವೇಶ ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮನವಿಯಲ್ಲಿ ಸಚಿನ್ ದೇಶಪಾಂಡೆ ಅವರು ಯಡಿಯೂರಪ್ಪ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ 2017ರಿಂದ ಬಾಕಿ ಇರುವ ಪ್ರಕರಣಗಳ ಸ್ಥಿತಿಗತಿಯನ್ನು ವಿವರಿಸಿದ್ದಾರೆ. ಪ್ರಕರಣಗಳಲ್ಲಿ ಬಿ ಎಸ್ ಯಡಿಯೂರಪ್ಪ ಪರವಾಗಿ ಸುಪ್ರೀಂ ಕೋರ್ಟ್ ತಡೆ ನೀಡುವುದು ಮತ್ತು ಮತ್ತೆ ಸುಮ್ಮನಾಗುವುದು ಆತಂಕಕಾರಿ ಬೆಳವಣಿಗೆಯಂತೆ ಕಂಡುಬರುತ್ತಿದೆ. ಇದು ನ್ಯಾಯಾಂಗ ಪಕ್ಷಪಾತತೆ ಇರುವಂತೆ ಕಾಣುತ್ತಿರುವುದರಿಂದ ಈ ವಿಚಾರವನ್ನು ತಮ್ಮ ಗಮನಕ್ಕೆ ತರಲಾಗುತ್ತಿದೆ ಎಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ.
ಕರ್ನಾಟಕ ಹೈಕೋರ್ಟ್ ತೀರ್ಪಿನಲ್ಲಿನ ದೋಷವನ್ನು ಚರ್ಚಿಸದೇ, ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್ 19ಕ್ಕೆ ವಿರುದ್ಧವಾಗಿ ಯಡಿಯೂರಪ್ಪ ಅವರು ಕೋರಿದ ತಕ್ಷಣ ಬಹುತೇಕ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವುದನ್ನು ಅವರು ಉಲೇಖಿಸಿದ್ದಾರೆ. ಬಿ ಎಸ್ ಯಡಿಯೂರಪ್ಪ ಪ್ರಕರಣಗಳಲ್ಲಿ ಚರ್ಚೆಯೇ ಇಲ್ಲದೇ ನೀಡಿರುವ ತಡೆಯಾಜ್ಞೆಗಳು ಹಲವು ವರ್ಷದಿಂದ ಈ ವರೆಗೂ ಚಾಲ್ತಿಯಲ್ಲಿವೆ. ಆದರೆ, ಬಿ ಎಸ್ ಯಡಿಯೂರಪ್ಪ ವಿರುದ್ಧದ ಪಿಸಿ ಕಾಯಿದೆ ಅಡಿ ಭ್ರಷ್ಟಾಚಾರ ಪ್ರಕರಣಗಳನ್ನು ಹೈಕೋರ್ಟ್ ವಜಾ ಮಾಡಿದ್ದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಮತ್ತು ಲೋಕಾಯುಕ್ತ/ಭ್ರಷ್ಟಾಚಾರ ನಿಗ್ರಹ ದಳ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದಾಗ ಇದುವರೆಗೂ ತಡೆ ನೀಡುವುದನ್ನು ಸುಪ್ರೀಂ ಕೋರ್ಟ್ ಪರಿಗಣಿಸಿಲ್ಲ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಸಚಿನ್ ದೇಶಪಾಂಡೆಯವರ ಕೋರಿಕೆಯೇನು?
ಯಡಿಯೂರಪ್ಪ ಮತ್ತು ಇತರೆ ಶಾಸಕರು/ಸಂಸದರ ವಿರುದ್ಧದ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳನ್ನು ತುರ್ತಾಗಿ ವಿಚಾರಣೆ ನಡೆಸಬೇಕು. ನಿರ್ದಿಷ್ಟವಾಗಿ ವಿಚಾರಣೆ ಇಲ್ಲದೇ ಹಲವು ವರ್ಷಗಳಿಂದ ತಡೆಯಾಜ್ಞೆ ಇರುವ ಪ್ರಕರಣಗಳನ್ನು ಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಹಲವು ಪ್ರಕರಣಗಳಲ್ಲಿ ತಡೆಯಾಜ್ಞೆ ವಿಸ್ತರಿಸಿರುವುದಕ್ಕೆ ನೀಡಿರುವ ಸಮರ್ಥನೆಯನ್ನು ನ್ಯಾಯಾಲಯವು ಪರಿಶೀಲಿಸಬೇಕು. ಭ್ರಷ್ಟಾಚಾರ ಪ್ರಕರಣಗಳಲ್ಲಿ ತುರ್ತು ವಿಚಾರಣೆ ನಡೆಸಿ ಬಿ ಎಸ್ ಯಡಿಯೂರಪ್ಪ ವಿರುದ್ಧದ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಕಾಲಮಿತಿ ನಿಗದಿಗೊಳಿಸಬೇಕು ಎಂದು ಅವರು ಕೋರಿದ್ದಾರೆ.
ಸಾರ್ವಜನಿಕ ಸೇವಕರ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳಲ್ಲಿ ಮಧ್ಯಂತರ ತಡೆ ನೀಡುವ ವಿಚಾರದಲ್ಲಿ ರೂಪಿಸಿರುವ ಮಾರ್ಗಸೂಚಿಯನ್ನು ಪರಿಗಣಿಸಿ, ತಡೆ ನೀಡಿರುವ ಪ್ರಕರಣಗಳನ್ನು ಆದ್ಯತೆಯ ಮೇಲೆ ವಿಚಾರಣೆಗೆ ಪರಿಗಣಿಸಬೇಕು ಎಂದು ಅವರು ಕೋರಿದ್ದಾರೆ.
ಬಿ ಎಸ್ ಯಡಿಯೂರಪ್ಪ ವಿರುದ್ದ ದಾಖಲಾಗಿರುವ ಪ್ರಕರಣಗಳ ಸ್ಥಿತಿಗತಿಯೇನು?
►ಆಲಂ ಪಾಷಾ ಪ್ರಕರಣ :
ಆಲಂ ಪಾಷಾ ಅವರು ಬಿ ಎಸ್ ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ 2021ರ ಜನವರಿ 05ರಂದು ಹೈಕೋರ್ಟ್, ಬಿ ಎಸ್ ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದಿರುವುದರಿಂದ ಪ್ರಾಸಿಕ್ಯೂಷನ್‌ಗೆ ಭ್ರಷ್ಟಾಚಾರ ಪ್ರತಿಬಂಧ ಕಾಯಿದೆ ಅಡಿ ಅನುಮತಿ ಬೇಕಿಲ್ಲ ಎಂದು ಹೇಳಿತ್ತು.
ಇದರ ಬೆನ್ನಿಗೇ ಬಿ ಎಸ್ ಯಡಿಯೂರಪ್ಪ ಅವರು ಬಂಧನ ಭೀತಿಯಿಂದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 2021ರ ಜನವರಿ 27ರಂದು ಸುಪ್ರೀಂ ಕೋರ್ಟ್ ಯಡಿಯೂರಪ್ಪ ಅವರ ಬಂಧನಕ್ಕೆ ತಡೆ ನೀಡಿ, ನೋಟಿಸ್ ಜಾರಿ ಮಾಡಿತ್ತು. ಆದೇಶದಲ್ಲಿ ಎಲ್ಲಿಯೂ ಏಕೆ ತಡೆ ನೀಡಲಾಗುತ್ತದೆ ಎಂಬುದಕ್ಕೆ ಕಾರಣ ನೀಡಿರಲಿಲ್ಲ. ಬಿ ಎಸ್ ಯಡಿಯೂರಪ್ಪ ಜೊತೆಗೂಡಿ ಪ್ರಕರಣದಲ್ಲಿ ಭಾಗಿಯಾಗಿರುವ ಇತರೆ ಆರೋಪಿಗಳು ಸಲ್ಲಿಸಿರುವ ಅರ್ಜಿಯಲ್ಲಿಯೂ ಅದೇ ಆದೇಶ ಪಾಲನೆ ಮಾಡಲಾಗಿದೆ. ನಾಲ್ಕು ವರ್ಷಗಳಿಂದ ಈ ಆದೇಶ ಚಾಲ್ತಿಯಲ್ಲಿದೆ.
►ಶಿವರಾಮ ಕಾರಂತ ಬಡಾವಣೆಯಲ್ಲಿ 257 ಎಕರೆ ಡಿನೋಟಿಫಿಕೇಶನ್
2008-2011ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ಡಾ. ಕೆ ಶಿವರಾಮ ಕಾರಂತ ಬಡಾವಣೆ ಅಭಿವೃದ್ಧಿಗೆ ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ 257 ಎಕರೆಯನ್ನು ಡಿನೋಟಿಫೈ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.
2017ರ ಜೂನ್ 06ರಂದು ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಎಸಿಬಿ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಿಸಿತ್ತು. ಇದನ್ನು ಪ್ರಶ್ನಿಸಿ ಯಡಿಯೂರಪ್ಪ ಅವರು ರಿಟ್ ಅರ್ಜಿ ಸಲ್ಲಿಸಿದ್ದರು. ಅದನ್ನು ಪುರಸ್ಕರಿಸಿದ್ದ ಕರ್ನಾಟಕ ಹೈಕೋರ್ಟ್ 2017ರ ಸೆಪ್ಟೆಂಬರ್ 22ರಂದು ಮಧ್ಯಂತರ ತಡೆಯಾಜ್ಞೆ ನೀಡಿತ್ತು.
ಹೈಕೋರ್ಟ್ ತಡೆಯಾಜ್ಞೆ ಪ್ರಶ್ನಿಸಿ ಎಸಿಬಿಯು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. 2017ರ ಡಿಸೆಂಬರ್ 11ರಂದು ಈ ಕುರಿತು ನೋಟಿಸ್ ಜಾರಿಯಾಗಿದ್ದು, ಇದುವರೆಗೆ ಯಾವುದೇ ಬೆಳವಣಿಗೆಯಾಗಿಲ್ಲ. 2018ರ ನವೆಂಬರ್ 14ರಂದು ಕೊನೆಯ ಬಾರಿಗೆ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಲಾಗಿತ್ತು. ಆರು ವರ್ಷಗಳಿಂದ ಇದುವರೆಗೂ ಪ್ರಕರಣವು ವಿಚಾರಣೆಗೆ ಬಂದಿಲ್ಲ. 2017ರ ಸೆಪ್ಟೆಂಬರ್‌ನಿಂದ ಪ್ರಕರಣದಲ್ಲಿ ತನಿಖೆಗೆ ತಡೆ ನೀಡಲಾಗಿದೆ.
►ವಾಸುದೇವ ರೆಡ್ಡಿ ಡಿನೋಟಿಫಿಕೇಶನ್ ಪ್ರಕರಣ
ಬಿ ಎಸ್ ಯಡಿಯೂರಪ್ಪ ಅವರು ಉಪಮುಖ್ಯಮಂತ್ರಿಯಾಗಿದ್ದಾಗ ನಡೆಸಿರುವ ಅಕ್ರಮ ಡಿನೋಟಿಫಿಕೇಶ್ ಆರೋಪ ಸಂಬಂಧ ಖಾಸಗಿ ದೂರಿನಲ್ಲಿ ವಿಶೇಷ ನ್ಯಾಯಾಲಯ ನೀಡಿರುವ ನಿರ್ದೇಶನ ಆಧರಿಸಿ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್ 13(1)(ಡಿ) ಜೊತೆಗೆ 13(2)ರ ಅಡಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನು ಪ್ರಶ್ನಿಸಿ ಬಿ ಎಸ್ ಯಡಿಯೂರಪ್ಪ 2020ರ ಡಿಸೆಂಬರ್ 22ರಂದು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. 2015ರ ಫೆಬ್ರವರಿ 18ರಿಂದ 2019ರ ಏಪ್ರಿಲ್ 02ರವರೆಗೆ ಯಾವುದೇ ತಡೆ ಇಲ್ಲದಿದ್ದರೂ ತನಿಖೆ ವಿಳಂಬ ಮಾಡಿದ್ದಕ್ಕೆ ಲೋಕಾಯುಕ್ತ ಪೊಲೀಸರನ್ನು ಹೈಕೋರ್ಟ್ ಟೀಕಿಸಿತ್ತು.
ಹೈಕೋರ್ಟ್ ಆದೇಶ ಪ್ರಶ್ನಿಸಿ ಬಿ ಎಸ್ ಯಡಿಯೂರಪ್ಪ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. 2022ರ ಫೆಬ್ರವರಿ 18ರಂದು ಪ್ರಕರಣವು ಪೀಠದ ಮುಂದೆ ವಿಚಾರಣೆಗೆ ಪಟ್ಟಿ ಮಾಡುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು. 2022ರ ಜುಲೈ 22ರಂದು ಮೊದಲ ವಿಚಾರಣೆ ನಡೆದಿತ್ತು. ನೋಟಿಸ್ ಜಾರಿ ಮಾಡಿದ್ದ ಸರ್ವೋಚ್ಚ ನ್ಯಾಯಾಲಯವು ತನಿಖೆಗೆ ತಡೆ ನೀಡಿತ್ತು. ಅಂದಿನಿಂದ 2023ರ ಫೆಬ್ರವರಿ 14ರ ರವರೆಗೆ ಕೊನೆಯ ಬಾರಿಗೆ ವಿಚಾರಣೆ ಮುಂದೂಡಲಾಗಿದೆ. ಇದುವರೆಗೂ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಲಾಗಿಲ್ಲ.
►ಸಿಎಜಿ ವರದಿಯಲ್ಲಿನ ಡಿನೋಟಿಫಿಕೇಶನ್
ಸಾಮಾಜಿಕ ಕಾರ್ಯಕರ್ತ ಜಯಕುಮಾರ್ ಹಿರೇಮಠ ಅವರು ಸಿಎಜಿ ವರದಿ ಆಧರಿಸಿ ಬಿ ಎಸ್ ಯಡಿಯೂರಪ್ಪ ಮತ್ತು ಇತರರ ವಿರುದ್ಧ ಅಕ್ರಮ ಡಿನೋಟಿಫಿಕೇಶನ್ ಪ್ರಕರಣ ದಾಖಲಿಸುವಂತೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇದನ್ನು ಆಧರಿಸಿ ಎಫ್‌ಐಆರ್ ದಾಖಲಿಸಲಾಗಿತ್ತು. ಈ ಎಫ್‌ಐಆರ್‌ಗಳನ್ನು ಪ್ರಶ್ನಿಸಿ ಬಿ ಎಸ್ ಯಡಿಯೂರಪ್ಪ ಸಲ್ಲಿಸಿದ್ದ 15 ಅರ್ಜಿಗಳನ್ನು ಹೈಕೋರ್ಟ್ ವಜಾ ಮಾಡಿತ್ತು.
►ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ
ಬಿ ಎಸ್ ಯಡಿಯೂರಪ್ಪ ಮತ್ತು ಇತರರ ವಿರುದ್ಧ ಲಂಚ, ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.
ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದಿಲ್ಲ ಎಂದು ನ್ಯಾಯಾಲಯ ಹೇಳಿತ್ತು. ಇದನ್ನು ಪ್ರಶ್ನಿಸಿ ಅಬ್ರಹಾಂ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಭಾಗಶಃ ಪುರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಬಿ ಎಸ್ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ್ದ ಸುಪ್ರೀಂ ಕೋರ್ಟ್ 2022ರ ಸೆಪ್ಟೆಂಬರ್ 23ರಂದು ವಿಶೇಷ ನ್ಯಾಯಾಲಯದಲ್ಲಿನ ಖಾಸಗಿ ದೂರಿನ ವಿಚಾರಣಾ ಪ್ರಕ್ರಿಯೆಗೆ ತಡೆ ನೀಡಿತ್ತು. ಅಂದಿನಿಂದ ಇದುವರೆಗೂ ಪ್ರಕರಣ ಇತ್ಯರ್ಥವಾಗಿಲ್ಲ.
ಸೌಜನ್ಯ : kannada.barandbench.com