ಆಧುನಿಕ ತಂತ್ರಜ್ಞಾನ ಜನ ಪರ ಯೋಜನೆಗಳಿಗೆ ನೆರವಾಗಲಿ : ಡಾ.ಶರಣ ಪ್ರಕಾಶ್ ಪಾಟೀಲ್
ಬೆಂಗಳೂರು : ಅತ್ಯಾಧುನಿಕ ಹಾಗೂ ನಾವೀನ್ಯತೆಯ ಯೋಜನೆಗಳು ಭವಿಷ್ಯದಲ್ಲಿ ಜನೋಪಕಾರಿ ಯೋಜನೆಗಳಿಗೆ ನೆರವಾಗಲಿ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಆಶಿಸಿದ್ದಾರೆ.
ಗುರುವಾರ ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ನಾವೀನ್ಯತೆಗಾಗಿ ಮನ್ನಣೆ ಗಳಿಸಿರುವ ಸಂಸ್ಥೆಗಳಿಗೆ, ವೈಯಕ್ತಿಕ ಸಾಧಕರಿಗೆ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಬೆಂಗಳೂರು ಟೆಕ್ ಶಂಗಸಭೆಯಲ್ಲಿ ನಾವೀನ್ಯತೆ, ಸ್ಥಿತಿಸ್ಥಾಪಕತ್ವ ಮತ್ತು ತಂತ್ರಜ್ಞಾನ, ಪ್ರಗತಿಯ ಮನೋಭಾವ ಸಮ್ಮಿಳಿತವಾಗಿರುತ್ತದೆ. ನಾವು ಉತ್ಕೃಷ್ಟತೆಯನ್ನು ಸಾಧಿಸಲು ಮುಂದಾಗಿದ್ದೇವೆ. ಈ ಟೆಕ್ ಶೃಂಗಸಭೆ ಮೂಲಕ ಅದನ್ನು ಸಾಕಾರಗೊಳಿಸಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.
ಬೆಂಗಳೂರು ಅದ್ಭುತ ಕಲ್ಪನೆಗಳ ತವರೂರು ಮತ್ತು ನವೋದ್ಯಮಗಳಿಗೆ ವಿಶೇಷ ಅವಕಾಶಗಳನ್ನು ತೆರದಿಟ್ಟಿದೆ. ಬಹುರಾಷ್ಟ್ರೀಯ ಸಂಸ್ಥೆಗಳು ಮತ್ತು ಉದ್ಯಮಿಗಳು ಕನಸು ಕಾಣಲು, ಅದನ್ನು ನನಸು ಮಾಡಿಕೊಳ್ಳಲು ಇಲ್ಲಿ ಸಾಧ್ಯವಾಗಿದೆ. ಬೆಂಗಳೂರು ಟೆಕ್ ಶೃಂಗಸಭೆಯು ಒಂದು ಪರಂಪರೆಗೆ ಸಾಕ್ಷಿಯಾಗಿದೆ. ನಾವೀನ್ಯತೆ, ಕಲ್ಪನೆಗಳು, ಭವಿಷ್ಯವನ್ನು ರೂಪಿಸಲು, ನಮ್ಮ ಯೋಜನೆಗಳನ್ನು ಸಾಕಾರಗೊಳಿಸಿಕೊಳ್ಳಲು ಉತ್ತಮ ವೇದಿಕೆ ಒದಗಿಸಿದೆ ಎಂದು ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.
ಸಾಧನೆಗಳು ಎಲ್ಲರಿಗೂ ಸ್ಫೂರ್ತಿಯಾಗಲಿ: ಟೆಕ್ ಶೃಂಗಸಭೆಯಲ್ಲಿ ನೀಡಲಾಗುತ್ತಿರುವ ಪ್ರಶಸ್ತಿಗಳು ಕೇವಲ ಮನ್ನಣೆಗೆ ಮಾತ್ರ ನೀಡಿರುವುದಿಲ್ಲ. ನಿಮ್ಮ ಪರಿಶ್ರಮ, ಸೃಜನಶೀಲತೆ ಮತ್ತು ಪರಿವರ್ತನಾತ್ಮಕ ಹಾಗೂ ಉತ್ತೇಜನಾತ್ಮಕ ತಂತ್ರಕ್ಕೆ ಮತ್ತು ನಿಮ್ಮ ಮಿತಿಯನ್ನು ದಾಟಿ ಮಾಡಿರುವ ಸಾಧನೆಗಳಿಗೆ ಸಿಕ್ಕಿರುವ ಗೌರವವಾಗಿದೆ. ನಿಮ್ಮ ಸಾಧನೆಗಳು ಎಲ್ಲರಿಗೂ ಸ್ಫೂರ್ತಿಯಾಗಲಿ. ಹೊಸ ತಂತ್ರಜ್ಞಾನಗಳ ಮೂಲಕ, ನೈಜ-ಜಗತ್ತಿನಲ್ಲಿ ಸಮಸ್ಯೆಗಳನ್ನು ಪರಿಹರಿಸಲು ನೆರವಾಗಲಿ ಎಂದು ಅವರು ಶುಭ ಹಾರೈಸಿದರು.
ತಂತ್ರಜ್ಞಾನ ಅಭಿವೃದ್ಧಿ ವೇಳೆ ನಾವು ಜನರ ಬಗ್ಗೆಯೂ ಆಲೋಚಿಸಬೇಕು. ಸಾಮೂಹಿಕ ಜ್ಞಾನವನ್ನು ಬಳಸಿ, ಅಂತರ್ಗತ, ಸಮರ್ಥನೀಯ ಮತ್ತು ಸಮಾನವಾದ ಪರಿಹಾರಗಳನ್ನು ರಚಿಸಲು ಕೌಶಲ್ಯಗಳು ನೆರವಾದರೆ ನಮ್ಮ ಸಾಧನೆ ಸಾರ್ಥಕವಾಗುತ್ತದೆ ಎಂದು ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.
‘ನಮ್ಮ ಬೆಂಗಳೂರು, ನಮ್ಮ ನಾವೀನ್ಯತೆ, ನಮ್ಮ ನಿಪುಣತೆ’: ‘ನಮ್ಮ ಬೆಂಗಳೂರು, ನಮ್ಮ ಹೆಮ್ಮೆ’ ಮಾತ್ರವಲ್ಲ, ‘ನಮ್ಮ ಬೆಂಗಳೂರು, ನಮ್ಮ ನಾವೀನ್ಯತೆ, ನಮ್ಮ ನಿಪುಣತೆ’ ಎಂಬುದನ್ನು ಜಗತ್ತಿಗೆ ತಿಳಿಸೋಣ. ಎಲ್ಲರೂ ಸೇರಿ ಇನ್ನಷ್ಟು ಹೊಸತನಕ್ಕೆ, ಅಭಿವೃದ್ಧಿ ಕಾರ್ಯಕ್ಕೆ ಮುನ್ನುಡಿ ಬರೆಯೋಣ ಎಂದು ಶರಣ ಪ್ರಕಾಶ್ ಪಾಟೀಲ್ ಕರೆ ನೀಡಿದರು.
ಸಮಾರಂಭದಲ್ಲಿ ಐಟಿ ಬಿಟಿ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಅರಣ್ಯ ಸಚಿವ ಈಶ್ವರ್ ಖಂಡ್ರೆ, ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಕುಮಾರ್ ಬಚ್ಚೇಗೌಡ, ಐಟಿ, ಬಿಟಿ ಇಲಾಖೆಯ ಕಾರ್ಯದರ್ಶಿ ಡಾ.ಏಕ್‍ರೂಪ್ ಕೌರ್ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.