‘ಬಿಪಿಎಲ್ ಕಾರ್ಡ್’ ಯಥಾಸ್ಥಿತಿಯಲ್ಲಿ ಮುಂದುವರಿಕೆ : ಸಚಿವ ಕೆ.ಎಚ್.ಮುನಿಯಪ್ಪ ಸ್ಪಷ್ಟನೆ
ಬೆಂಗಳೂರು : ‘ಸರಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರನ್ನು ಹೊರತುಪಡಿಸಿದರೆ, ಉಳಿದೆಲ್ಲರ ಬಿಪಿಎಲ್ ಕಾರ್ಡ್‍ಗಳು ಮೊದಲಿದ್ದಂತೆ ಯಥಾಸ್ಥಿತಿಯಲ್ಲಿ ಮುಂದುವರೆಯಲಿವೆ’ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ‘ಈಗಾಗಲೇ ಪರಿಷ್ಕರಣೆಗೆ ಒಳಪಟ್ಟು, ಅಮಾನತುಗೊಂಡಿರುವ ಕಾರ್ಡ್‍ಗಳನ್ನು 7 ದಿನದೊಳಗೆ ಸರಿಪಡಿಸಿ ಅದೇ ಐಡಿಯಲ್ಲಿ ಲಾಗಿನ್ ಆಗಿ ಪಡಿತರ ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಬಡವರಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು.
ಸದ್ಯಕ್ಕೆ ಬಿಪಿಎಲ್ ಕಾರ್ಡ್‍ಗಳ ಪರಿಷ್ಕರಣೆ ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುವವರೆಗೂ ಯಾವುದೇ ಬದಲಾವಣೆ ಇರುವುದಿಲ್ಲ. ಅಲ್ಲಿಯವರೆಗೂ ಯಥಾಸ್ಥಿತಿಯಲ್ಲೇ ಮುಂದುವರೆಸುತ್ತೇವೆ ಎಂದು ಕೆ.ಎಚ್.ಮುನಿಯಪ್ಪ ಖಚಿತಪಡಿಸಿದರು.
ಬಿಪಿಎಲ್‍ನಿಂದ ವಂಚಿತರಾಗಿರುವ ಅರ್ಹರು ಯಾರೇ ಇದ್ದರೂ ಒಂದು ವಾರದೊಳಗೆ ಅವರನ್ನೆಲ್ಲಾ ಬಿಪಿಎಲ್ ವ್ಯಾಪ್ತಿಗೆ ತಂದು ಸಮಸ್ಯೆಯನ್ನು ಸರಿಪಡಿಸುತ್ತೇವೆ. ಬಿಪಿಎಲ್‍ಗೆ ಅನರ್ಹರೆಂದು ಕಂಡು ಬಂದವರನ್ನು ಎಪಿಎಲ್‍ಗೆ ಸೇರಿಸಲಾಗಿದೆ. ಬಿಪಿಎಲ್‍ಗೆ ಅರ್ಹರಿದ್ದು ಎಪಿಎಲ್‍ಗೆ ಸೇರಿಸಿದ್ದರೆ ಅಂತಹವರನ್ನು ಪುನಃ ಬಿಪಿಎಲ್‍ಗೆ ಸೇರಿಸುತ್ತೇವೆ ಎಂದು ಕೆ.ಎಚ್.ಮುನಿಯಪ್ಪ ತಿಳಿಸಿದರು.
ಪಾನ್‍ಕಾರ್ಡ್ ಆಧಾರಿತ ಪರಿಶೀಲನೆಯ ವೇಳೆ ಕೆಲವರು ಆದಾಯ ತೆರಿಗೆ ಪಾವತಿಗೆ ವಿಳಂಬವಾಗಿ ದಂಡ ವಿಧಿಸಿಕೊಂಡಿದ್ದಾರೆ. ಅಲ್ಲಿಗೆ ಅವರು ಆದಾಯ ತೆರಿಗೆ ಪಾವತಿದಾರರು ಎಂಬುದು ಖಚಿತವಾಗಿದೆ. ಇನ್ನು ಕೆಲವರು ಸರಕಾರಿ ನೌಕರರಿದ್ದಾರೆ. ಕೇಂದ್ರ ಸರಕಾರದ ಮಾನದಂಡಗಳ ಅನುಸಾರವೇ 2 ತಿಂಗಳಿನಿಂದ ರಾಜ್ಯ ಸರಕಾರ ಬಿಪಿಎಲ್ ಕಾರ್ಡ್‍ಗಳ ಪರಿಶೀಲನೆ ಆರಂಭಿಸಿತ್ತು ಎಂದು ಕೆ.ಎಚ್. ಮುನಿಯಪ್ಪ ಹೇಳಿದರು.
ಆದಾಯ ತೆರಿಗೆ ಪಾವತಿ ಮತ್ತು ಸರಕಾರಿ ನೌಕರರ ಒಟ್ಟು 1,02,509 ಕಾರ್ಡ್‍ಗಳಲ್ಲಿ 76,176 ಕಾರ್ಡ್‍ಗಳನ್ನು ಪರಿಶೀಲಿಸಲಾಗಿದೆ. 17,710 ಕಾರ್ಡ್‍ಗಳ ಪರಿಶೀಲನೆ ಪ್ರಗತಿಯಲ್ಲಿದೆ. ಈ ಪರಿಶೀಲನೆಯಲ್ಲಿ 68,017 ಕಾರ್ಡ್‍ಗಳನ್ನು ಎಪಿಎಲ್‍ಗೆ ಸೇರಿಸಲಾಗಿದೆ. 16,806 ಅರ್ಹ ಕಾರ್ಡ್‍ಗಳನ್ನು ಬಿಪಿಎಲ್‍ನಲ್ಲಿ ಮುಂದುವರೆಸಲಾಗಿದೆ ಎಂದು ಕೆ.ಎಚ್.ಮುನಿಯಪ್ಪ ತಿಳಿಸಿದರು.
ಕೇಂದ್ರ ಸರಕಾರ ಸಹ ಬಿಪಿಎಲ್ ಕಾರ್ಡ್‍ಗಳ ಪರಿಷ್ಕರಣೆ ಮಾಡಿದ್ದು, 5.08 ಕೋಟಿ ಕಾರ್ಡ್‍ಗಳನ್ನು ರದ್ದು ಮಾಡಿದೆ. ರಾಜ್ಯದಲ್ಲಿ 8,647 ಕಾರ್ಡ್‍ಗಳನ್ನು ಅಮಾನತುಗೊಳಿಸಲಾಗಿದೆ. 59,379 ಕಾರ್ಡ್‍ಗಳನ್ನು ಬಿಪಿಎಲ್‍ನಿಂದ ಎಪಿಎಲ್ ಆಗಿ ಪರಿವರ್ತಿಸಲಾಗಿದೆ. ಇದರಲ್ಲೂ 16,806 ಕಾರ್ಡ್‍ಗಳನ್ನು ಬಿಪಿಎಲ್ ಆಗಿಯೇ ಮತ್ತೆ ಮುಂದುವರೆಸಲಾಗಿದೆ ಎಂದು ಕೆ.ಎಚ್.ಮುನಿಯಪ್ಪ ತಿಳಿಸಿದರು.
ಎರಡು ವರ್ಷಗಳಿಂದ 2.95 ಲಕ್ಷ ಅರ್ಜಿಗಳು ಬಾಕಿ ಉಳಿದಿದ್ದವು. ಅವುಗಳನ್ನು ಪರಿಷ್ಕರಿಸಿ 2,69,536 ಮಂದಿಗೆ ಕಾರ್ಡ್ ನೀಡಿದ್ದು, ಅವರು ಪಡಿತರ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಶೇ.66ರಷ್ಟು ಬಿಪಿಎಲ್ ಕಾರ್ಡ್‍ಗಳಿದ್ದರೂ ಮತ್ತಷ್ಟು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಸದ್ಯಕ್ಕೆ ಸ್ಥಗಿತಗೊಂಡಿರುವ ಪರಿಷ್ಕರಣೆ ಕಾರ್ಯವನ್ನು ಮತ್ತೆ ತೆಗೆದುಕೊಂಡು ಎಲ್ಲವನ್ನೂ ಸರಿಪಡಿಸಿದ ಬಳಿಕ ಹೊಸ ಕಾರ್ಡ್‍ಗಳ ಪರಿಶೀಲನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಮುನಿಯಪ್ಪ ತಿಳಿಸಿದರು.
ಅನ್ನಭಾಗ್ಯ ಯೋಜನೆಯಡಿ ಆಗಸ್ಟ್ ತಿಂಗಳವರೆಗೆ ಹಣವನ್ನು ಫಲಾನುಭವಿಗಳ ಖಾತೆಗೆ ಪಾವತಿಸಲಾಗಿದೆ. ಸೆಪ್ಟೆಂಬರ್, ಅಕ್ಟೋಬರ್ ತಿಂಗಳ ನಗದನ್ನು ಒಂದು ವಾರದೊಳಗಾಗಿ ಬಿಡುಗಡೆ ಮಾಡಲಾಗುವುದು ಎಂದು ಕೆ.ಎಚ್.ಮುನಿಯಪ್ಪ ಹೇಳಿದರು.
1,50,59,431 ಕಾರ್ಡ್‍ಗಳ ಪೈಕಿ 1,02,509 ಮಾತ್ರ ಪರಿಷ್ಕರಣೆ..!
ರಾಜ್ಯದಲ್ಲಿ ಅಂತ್ಯೋದಯ ಅನ್ನಯೋಜನೆಯಡಿ 10,68,028 ಕಾರ್ಡ್‍ಗಳಿವೆ. ಬಿಪಿಎಲ್ ಕಾರ್ಡ್‍ಗಳು 1,02,44,435 ಇವೆರಡೂ ಸೇರಿ 1,13,12,463 ಕಾರ್ಡ್‍ಗಳಿವೆ. ರಾಜ್ಯ ಸರಕಾರ 11,84,425 ಬಿಪಿಎಲ್ ಕಾರ್ಡ್‍ಗಳನ್ನು ನೀಡಿದೆ. ಕೇಂದ್ರ ಮತ್ತು ರಾಜ್ಯ ಸರಕಾರ ನೀಡಿರುವುದು ಹಾಗೂ ಅಂತ್ಯೋದಯ ಅನ್ನ ಯೋಜನೆಯಡಿ 1,24,97,088 ಕಾರ್ಡ್‍ಗಳನ್ನು ನೀಡಲಾಗಿದೆ. ಆದ್ಯತೇತರ ಕುಟುಂಬಗಳ(ಎಪಿಎಲ್) 25,62,343 ಕಾರ್ಡ್‍ಗಳಿವೆ. ರಾಜ್ಯದಲ್ಲಿ ಒಟ್ಟಾರೆ 1,50,59,431 ಕಾರ್ಡ್‍ಗಳಿದ್ದು, ಇದರಲ್ಲಿ 1,02,509 ಕಾರ್ಡ್‍ಗಳನ್ನು ಮಾತ್ರ ಪರಿಷ್ಕರಣೆ ಮಾಡಲಾಗಿದೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ನಾನೇ ಹೊಣೆ: ಕರ್ನಾಟಕದಲ್ಲಿ ಬಿಪಿಎಲ್ ಕಾರ್ಡ್‍ಗಳ ಪ್ರಮಾಣ ಶೇ.66ರಷ್ಟಿದೆ. ಬೇರೆ ಯಾವ ರಾಜ್ಯಗಳಲ್ಲೂ ಬಿಪಿಎಲ್ ಕಾರ್ಡ್ ಪ್ರಮಾಣ ಶೇ.50ರಷ್ಟು ದಾಟಿಲ್ಲ. ಆದರೆ, ಇದು ನಮ್ಮಲ್ಲಿ ಹೆಚ್ಚಿರುವ ಕಾರಣ ಪರಿಷ್ಕರಣೆ ಮಾಡಲು ಎರಡು ತಿಂಗಳ ಹಿಂದೆ ನಿರ್ಧರಿಸಲಾಗಿತ್ತು. ಇದರಲ್ಲಿ ಅಧಿಕಾರಿಗಳು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಪಾನ್‍ಕಾರ್ಡ್ ಆಧರಿಸಿ ಪರಿಷ್ಕರಣೆ ನಡೆದಿದೆ. ಶೇ.1 ಅಥವಾ 2ರಷ್ಟು ಗೊಂದಲಗಳಾಗಿವೆ. ಅರ್ಹರ ಕಾರ್ಡ್‍ಗಳು ಸಮಸ್ಯೆಗೊಳಗಾಗಿರಬಹುದು. ಏನೇ ಲೋಪಗಳಾಗಿದ್ದರೂ ಅದನ್ನು ಸರಿಪಡಿಸಲಾಗುವುದು ಮತ್ತು ಇದರ ಸಂಪೂರ್ಣ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೇನೆ ಎಂದು ಕೆ.ಎಚ್.ಮುನಿಯಪ್ಪ ಹೇಳಿದರು.