6ನೇ ಜಾಗತಿಕ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿರುವ ಭಾರತ : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತವು ಈಗ ಜಗತ್ತಿನ 6ನೇ ಜಾಗತಿಕ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. 5ನೇ ಸ್ಥಾನಕ್ಕೆ ಏರಲು ಭಾರತ ವೇಗವಾಗಿ ಸಾಗುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಗುರುವಾರ ನಗರದಲ್ಲಿ ಭಾರತೀಯ ಲೋಹ ಸಂಸ್ಥೆ ಹಮ್ಮಿಕೊಂಡಿದ್ದ ಲೋಹಶಾಸ್ತ್ರಜ್ಞ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಪ್ರಯತ್ನಕ್ಕೆ ಉಕ್ಕು ಉದ್ಯಮ ಬಹುದೊಡ್ಡ ಕೊಡುಗೆ ನೀಡುತ್ತಿದೆ. ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕ ಶಕ್ತಿಯಾಗಲು ಶ್ರಮಿಸುತ್ತಿರುವಾಗ, ಆ ಹಾದಿಯಲ್ಲಿ ಉಕ್ಕು ಕ್ಷೇತ್ರ ನಿರ್ಣಾಯಕ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.
ಉಕ್ಕು ಕ್ಷೇತ್ರದ ಉನ್ನತಿಗಾಗಿ ಕೇಂದ್ರ ಸರಕಾರ ಸದಾ ಬೆಂಬಲ ಕೊಡುತ್ತಿದೆ. ಈ ನಿಟ್ಟಿನಲ್ಲಿ ರೂಪಿಸಲಾಗಿರುವ ರಾಷ್ಟ್ರೀಯ ಉಕ್ಕಿನ ನೀತಿ ಈ ಉದ್ಯಮಕ್ಕೆ ಬಲ ನೀಡುತ್ತಿದೆ. ಸ್ಪೆಷಾಲಿಟಿ ಸ್ಟೀಲ್ ಉತ್ಪಾದನೆ, ಗ್ರೀನ್ ಸ್ಟೀಲ್ ತಯಾರಿಕೆಯಲ್ಲಿ ಮುಂಚೂಣಿಗೆ ಬರಲು ಎಲ್ಲ ರೀತಿಯ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ಉತ್ಪಾದನಾ ಸಂಪರ್ಕ ಉಪಕ್ರಮ ಸೇರಿದಂತೆ ಹಲವಾರು ಪರಿಣಾಮಕಾರಿ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗಿದೆ. ಹೀಗಾಗಿ ಭಾರತದಲ್ಲಿ ಉಕ್ಕು ಉದ್ಯಮ ಸಶಕ್ತವಾಗಿ ಹೊರಹೊಮ್ಮುತ್ತಿದೆ. ಉಕ್ಕು ಕ್ಷೇತ್ರದಲ್ಲಿ ಸುಸ್ಥಿರ ಮತ್ತು ಚಲನಶೀಲ ಅಭಿವೃದ್ಧಿಗೆ ಕೇಂದ್ರ ಸರಕಾರ ಬದ್ಧವಾಗಿದೆ. ಅದಕ್ಕೆ ಪೂರಕವಾಗಿ ನಾವು ನಿರ್ದಿಷ್ಟ ಕಾರ್ಯಸೂಚಿಯ ಮೇರೆಗೆ ಕೆಲಸ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ಸಂಶೋಧನೆ ಮತ್ತು ಅಭಿವೃದ್ಧಿಗೆ ಅತಿಹೆಚ್ಚು ಪ್ರಾಮುಖ್ಯತೆ ಕೊಡುವುದರ ಜತೆಯಲ್ಲಿಯೇ, ಉಕ್ಕು ಉತ್ಪಾದನೆ ಪ್ರಕ್ರಿಯೆಯಲ್ಲಿ ಉಂಟಾಗುತ್ತಿರುವ ವಾಯುಮಾಲಿನ್ಯವನ್ನು ಶೂನ್ಯ ಮಟ್ಟಕ್ಕೆ ತರುವ ಗುರಿ ಹೊಂದಲಾಗಿದೆ. 2070ರ ವೇಳೆಗೆ ಈ ಗುರಿಯನ್ನು ಖಚಿತವಾಗಿ ಸಾಧಿಸಲಾಗುವುದು ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಜಾಗತಿಕ ಪರಿಸರ ಸಮತೋಲನದ ಉದ್ದೇಶದ ಹಿನ್ನೆಲೆಯಲ್ಲಿ ಉಕ್ಕಿನ ಸುಸ್ಥಿರ ಉತ್ಪಾದನೆಗೆ ಹೈಡ್ರೋಜನ್ ಆಧಾರಿತ ಉಕ್ಕು ತಯಾರಿಕೆ ಮತ್ತು ಉಕ್ಕಿನ ಮರು ಬಳಕೆಯನ್ನು ಉತ್ತೇಜಿಸಲಾಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು. ಭಾರತೀಯ ಲೋಹ ಸಂಸ್ಥೆ ಅಧ್ಯಕ್ಷ ಸಜ್ಜನ್ ಜಿಂದಾಲ್ ಅವರು ಕುಮಾರಸ್ವಾಮಿಯನ್ನು ಬರಮಾಡಿಕೊಂಡು ಗೌರವಿಸಿದರು.
ಈ ಸಂದರ್ಭದಲ್ಲಿ ಉಕ್ಕು ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಎಸ್.ಆರ್.ಉಕ್ಕು ಸಂಸ್ಥೆ ಸಿಇಒ ಶಶಿ ಮೊಹಂತಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ, ಡಾ.ಟಿ.ಪಿ.ಡಿ.ರಾಜನ್ ಅವರಿಗೆ ರಾಷ್ಟ್ರೀಯ ಲೋಹಶಾಸ್ತ್ರಜ್ಞ ಪ್ರಶಸ್ತಿ, ಡಾ.ಡಿ.ಸತೀಶ್ ಕುಮಾರ್ ಅವರಿಗೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಶಸ್ತಿ, ಡಾ.ಸಾಯಿ ಗೌತಮ್ ಕೃಷ್ಣನ್ ಮತ್ತು ಬಿರಾಜ್ ಕುಮಾರ್ ಸಾಹು ಅವರಿಗೆ ಯುವ ಲೋಹಶಾಸ್ತ್ರಜ್ಞ ಪ್ರಶಸ್ತಿಯನ್ನು ಕುಮಾರಸ್ವಾಮಿ ಪ್ರದಾನ ಮಾಡಿದರು.
ಭಾರತೀಯ ಉಕ್ಕು ಪ್ರಾಧಿಕಾರದ ಅಧ್ಯಕ್ಷ ಅಮರೆಂದು ಪ್ರಕಾಶ್, ಭಾರತೀಯ ಲೋಹ ಸಂಸ್ಥೆ ಉಪಾಧ್ಯಕ್ಷ ಪ್ರೊ.ಬಿ.ಎಸ್.ಮೂರ್ತಿ, ಬ್ರಿಗೇಡಿಯರ್ ಅರುಣ್ ಗಂಗೂಲಿ, ಸಂಸ್ಥೆಯ ಸಂಚಾಲಕ ಡಾ.ಧೀರೇನ್ ಪಾಂಡ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.