ದಲಿತ ಸಿಎಂ ಪ್ರಸ್ತಾಪ ಬಂದರೆ ಖರ್ಗೆ ನಂತರ ನಾನೇ ಹಿರಿಯ : ಸಚಿವ ಕೆ.ಎಚ್.ಮುನಿಯಪ್ಪ
Update: 2024-11-21 15:28 GMT
ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ದಲಿತರನ್ನು ಸಿಎಂ ಮಾಡುವ ಪ್ರಸ್ತಾಪ ಬಂದರೆ ಪರಿಶಿಷ್ಟ ಜಾತಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ನಂತರ ನಾನು ಹಿರಿಯನಿದ್ದೇನೆ. ಮುಖ್ಯಮಂತ್ರಿ ಆಯ್ಕೆ ಮಾಡುವುದರ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಬೇಕು ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಸಿಎಂ ಯಾವಾಗ ಆಗುತ್ತೀರಾ? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪರಿಶಿಷ್ಟ ಜಾತಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ನಂತರ ನಾನು ಹಿರಿಯನಿದ್ದೇನೆ. ಖರ್ಗೆ ಅವರು 50 ವರ್ಷಗಳಿಂದ ರಾಜಕೀಯ ಜೀವನದಲ್ಲಿದ್ದರೂ ಮುಖ್ಯಮಂತ್ರಿಯಾಗಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಪ್ರಸ್ತುತ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ, ಖಾಲಿ ಇದ್ದರೆ ತಾನೇ ಆ ಯೋಚನೆ ಬರಲು ಸಾಧ್ಯ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ಮಾಡುತ್ತಿದ್ದಾರೆ ಎಂದು ಮುನಿಯಪ್ಪ ತಿಳಿಸಿದರು.