ಸಾಲ ಕೊಡಲಿಲ್ಲ ಎಂದು ಬಾರ್ ಸಿಬ್ಬಂದಿಗೆ ಚಾಕು ಇರಿತ: ಮೂವರ ವಿರುದ್ಧ ಪ್ರಕರಣ ದಾಖಲು

Update: 2023-09-01 16:30 GMT

ಬೆಂಗಳೂರು, ಸೆ.1: ಮದ್ಯ ಸೇವನೆಗೆ ಸಾಲ ಕೊಡಲಿಲ್ಲ ಎಂದು ಬಾರ್ ಸಿಬ್ಬಂದಿಯ ಮೇಲೆ ಜಗಳ ತೆಗೆದ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹಲ್ಲೆ ನಡೆಸಿರುವ ಘಟನೆ ಇಲ್ಲಿನ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯ ಯಡಿಯೂರಿನಲ್ಲಿ ನಡೆದಿರುವುದಾಗಿ ವರದಿಯಾಗಿದೆ. 

ಯಡಿಯೂರಿನ ಎಂಬಿಆರ್ ಬಾರ್‍ನಲ್ಲಿ ಆ.28ರ ರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸ್ವಾಗತ್ ಗೌಡ ಎಂಬುವವರು ಹಲ್ಲೆಗೊಳಗಾದ ಬಾರ್ ಕ್ಯಾಶಿಯರ್ ಆಗಿದ್ದಾರೆ. ಪುನೀತ್ ಎಂಬಾತ ಹಾಗೂ ಆತನ ಸಹಚರರು ಕೃತ್ಯವೆಸಗಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆ.28ರ ರಾತ್ರಿ ಎಂದಿನಂತೆ ಬಾರ್ ಮುಚ್ಚುವ ವೇಳೆಗೆ ಬೈಕಿನಲ್ಲಿ ಮೂವರು ಆರೋಪಿಗಳು ಬಂದಿದ್ದಾರೆ. ಈ ಸಂದರ್ಭದಲ್ಲಿ ಮದ್ಯ ನೀಡುವಂತೆ ಕೇಳಿದ್ದಾರೆ. ಇದಕ್ಕೆ ನಿರಾಕರಿಸಿದ ಬಾರ್ ಸಿಬ್ಬಂದಿ ಸ್ವಾಗತ್ ಗೌಡನ ಮೇಲೆ ಹರಿಹಾಯ್ದಿದ್ದಾರೆ.

ಗಾಂಜಾ ನಶೆಯಲ್ಲಿದ್ದ ಆರೋಪಿಗಳು ತಮ್ಮ ಬಳಿಯಿದ್ದ ಚಾಕುವಿನಿಂದ ಸ್ವಾಗತ್ ಗೌಡ ಅವರ ಹೊಟ್ಟೆಗೆ ಇರಿದಿದ್ದು, ಇದರಿಂದ ರಕ್ತಸ್ರಾವವಾಗಿ ಅವರು ಕುಸಿದು ಬಿದ್ದಿದ್ದಾರೆ. ಆತನನ್ನು ಕಂಡು ಆರೋಪಿಗಳು ಪರಾರಿಯಾಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News