ಬಿಬಿಎಂಪಿ, ಲೋಕಸಭಾ ಚುನಾವಣೆ | ಕೆಪಿಸಿಸಿ ಕಚೇರಿಯಲ್ಲಿ ಅಲ್ಪಸಂಖ್ಯಾತ ನಾಯಕರ ಸಭೆ; ಡಿಕೆಶಿ ಭಾಗಿ

Update: 2023-08-06 11:32 GMT

ಬೆಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇಂದು (ರವಿವಾರ) ಕೆಪಿಸಿಸಿ ಕಚೇರಿಯಲ್ಲಿ ಅಲ್ಪಸಂಖ್ಯಾತ ಶಾಸಕರು ಹಾಗೂ ಮುಖಂಡರ ಸಭೆ ನಡೆಸಿದರು. 

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತಮಾಡಿದ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, '' ಅಲ್ಪಸಂಖ್ಯಾತರ ನಾಯಕರ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಈ ಸಮುದಾಯದ ನಾಯಕರು ಮುಂಬರುವ ಪಾಲಿಕೆ ಚುನಾವಣೆಯಲ್ಲಿ ಈ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕೇಳಿದ್ದಾರೆ. ಬಿಜೆಪಿ ಸರ್ಕಾರ ವಾರ್ಡ್ ಮರುವಿಂಗಡಣೆ ಹೆಸರಲ್ಲಿ ಇವರ ಕ್ಷೇತ್ರಗಳನ್ನು ವಿಭಜಿಸಿ, ಈ ಸಮುದಾಯದವರು ಅವರ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಾಧ್ಯವಾಗದ ರೀತಿಯಲ್ಲಿ ಮಾಡಲಾಗಿತ್ತು. ಆಮೂಲಕ ಅವರ ಮತಗಳನ್ನು ಒಡೆಯುವ ಕೆಲಸ ಮಾಡಲಾಗಿತ್ತು. ಹೀಗಾಗಿ ಅಲ್ಪಸಂಖ್ಯಾತರು ತಮ್ಮ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಕೇಳಿದ್ದಾರೆ''  ಎಂದು ತಿಳಿಸಿದರು. 

''ಈ ವಿಚಾರವನ್ನು ಸಮಿತಿಗೆ ಪಾಲಿಕೆ ಚುನಾವಣೆ ಸಮಿತಿ ಮುಂದೆ ಇಡಲಾಗುವುದು. ಅವರ ಜನಸಂಖ್ಯೆ ಆಧಾರದ ಮೇಲೆ ಅವರಿಗೆ ಸ್ಥಾನಮಾನ ನೀಡಲಾಗುವುದು. ಇನ್ನು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಬೇಕು, ಸಂಸತ್ ಚುನಾವಣೆಗೆ ತಯಾರಿ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಎಲ್ಲಾರೂ ಒಂದಾಗಿ ಕೆಲಸ ಮಾಡಿ ದೇಶವನ್ನು ರಕ್ಷಣೆ ಮಾಡಬೇಕು. ಇಂಡಿಯಾ ಗೆಲ್ಲಿಸಬೇಕು ಎಂಬುದು ನಮ್ಮೆಲ್ಲರ ಅಜೆಂಡಾ ಆಗಿದೆ'' ಎಂದು ಹೇಳಿದರು. 

ಲೋಕಸಭೆ ಚುನಾವಣೆಯಲ್ಲಿ 2 ಸ್ಥಾನ ನೀಡಬೇಕು ಎಂಬ ಬೇಡಿಕೆ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ, "ಅವರ ಬೇಡಿಕೆಯಂತೆ ಸ್ಥಾನ ನೀಡಬೇಕು. ಅದರಲ್ಲಿ ತಪ್ಪೇನಿದೆ? ಅವರ ಜನಸಂಖ್ಯೆ ಅನುಗುಣವಾಗಿ ಅವರಿಗೆ ಪ್ರಾತಿನಿಧ್ಯ ನೀಡಬೇಕು. ಎಲ್ಲಿ ಅವರು ಗೆಲ್ಲುವ ಅವಕಾಶ ಇರುತ್ತದೆಯೋ ಅಲ್ಲಿ ಟಿಕೆಟ್ ನೀಡಲಾಗುವುದು" ಎಂದು ತಿಳಿಸಿದರು.

ರಾಜ್ಯಪಾಲರು ಪರಿಷತ್ ಸದಸ್ಯರ ಆಯ್ಕೆ ವಿಚಾರವಾಗಿ ವರದಿ ಕೇಳಿರುವ ಬಗ್ಗೆ ಪ್ರಶ್ನಿಸಿದಾಗ, "ರಾಜ್ಯಪಾಲರು ವರದಿ ಕೇಳಿರುವ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಮುಖ್ಯಮಂತ್ರಿಗಳು ಹಾಗೂ ನಮ್ಮ ಹೈಕಮಾಂಡ್ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಿದೆ" ಎಂದು ತಿಳಿಸಿದರು.

ಕಾಂಗ್ರೆಸ್ ಶಾಸಕರ ಜತೆಗಿನ ಸಭೆ ಕುರಿತು ಕೇಳಿದಾಗ, "ಮುಖ್ಯಮಂತ್ರಿಗಳು ಹಾಗೂ ನಾನು ನಮ್ಮ ಪಕ್ಷದ ಶಾಸಕರ ಜತೆ ಚರ್ಚೆ ಮಾಡುವುದಾಗಿ ಹೇಳಿದ್ದು, ಅದಕ್ಕಾಗಿ ಕೆಲವು ಜಿಲ್ಲೆಗಳ ಶಾಸಕರ ಸಭೆ ನಾಳೆ ಕರೆದಿದ್ದೇವೆ. ಅಲ್ಲಿ ಶಾಸಕರ ಜತೆ ಚರ್ಚೆ ಮಾಡುತ್ತೇವೆ" ಎಂದು ತಿಳಿಸಿದರು.

 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News