ಬೆಂಗಳೂರು ‘ಬ್ಯಾರಿ ಸೆಂಟ್ರಲ್ ಕಮಿಟಿ’ ವತಿಯಿಂದ ಜು.1ರಿಂದ ‘ಬ್ಯಾರಿ ಸದಸ್ಯತ್ವ ಅಭಿಯಾನ’

Update: 2024-06-28 17:29 GMT

ಬೆಂಗಳೂರು: ‘ಬ್ಯಾರಿ ಸೆಂಟ್ರಲ್ ಕಮಿಟಿ’ಯ ವತಿಯಿಂದ ಬೆಂಗಳೂರಿನಲ್ಲಿರುವ ಬ್ಯಾರಿ ಸಮುದಾಯದವರ ಸದಸ್ಯತ್ವ ಅಭಿಯಾನವನ್ನು ಜು.1ರಿಂದ 30ರ ವರೆಗೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕಮಿಟಿಯ ಅಧ್ಯಕ್ಷ ಶಬೀರ್ ಬ್ರಿಗೇಡ್ ತಿಳಿಸಿದ್ದಾರೆ.

ಶುಕ್ರವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಬಹುಮುಖ್ಯ ಸಮುದಾಯಗಳಲ್ಲಿ ಒಂದಾದ ‘ಬ್ಯಾರಿ ಸಮುದಾಯ’ದವರು ಬೆಂಗಳೂರಿನಲ್ಲಿ ಅಂದಾಜು 1 ಲಕ್ಷಕ್ಕೂ ಹೆಚ್ಚು ಜನ ಶಿಕ್ಷಣ, ಉದ್ಯೋಗ, ವ್ಯಾಪಾರ ಮಾಡಿಕೊಂಡು ನಗರದಲ್ಲಿ ವಾಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಬ್ಯಾರಿ ಸಮುದಾಯದ ಜನರನ್ನು ಒಗ್ಗೂಡಿಸುವ ಉದ್ದೇಶದಿಂದ ಮತ್ತು ಸಮುದಾಯದ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನದಿಂದ ಬ್ಯಾರಿ ಸೆಂಟ್ರಲ್ ಕಮಿಟಿ ಸಂಘಟನೆ ರಚಿಸಲಾಗಿದೆ. ಹಲವು ಸಾಮಾಜಿಕ ಸೇವೆಗಳನ್ನು ಸಂಘಟನೆ ಮಾಡುತ್ತಾ ಬಂದಿದ್ದು, ನಗರದಲ್ಲಿ ನೆಲೆಸಿರುವ ಬ್ಯಾರಿ ಸಮುದಾಯದ ಜನರನ್ನು ತಲುಪುವ ಉದ್ದೇಶದಿಂದ ಬೃಹತ್ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಬ್ಯಾರಿ ಸಮುದಾಯದ ವ್ಯಕ್ತಿಗಳು ಬೆಂಗಳೂರು ಮತ್ತು ಸುತ್ತಮುತ್ತಲಿನ ಭಾಗದಲ್ಲಿ ಏನಾದರೂ ಅವಘಡ, ಅಪಘಾತಗಳಿಗೆ ಒಳಗಾದಾಗ ತಕ್ಷಣ ನೆರವಿಗೆ ಬರುವುದು, ಉನ್ನತ ವ್ಯಾಸಂಗಕ್ಕೆ ಬರುವ ಸಮುದಾಯದ ವಿದ್ಯಾರ್ಥಿಗಳಿಗೆ ಸಹಕಾರ ಒದಗಿಸುವುದು. ಉದ್ಯೋಗ, ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಬ್ಯಾರಿಗಳು ಅನ್ಯಾಯಕ್ಕೊಳಗಾಗುವ ಸಂದರ್ಭದಲ್ಲಿ ಕಾನೂನಾತ್ಮಕ ನೆರವು ನೀಡುವುದು ಮತ್ತು ಸಮುದಾಯದ ಶೈಕ್ಷಣಿಕ, ಆರ್ಥಿಕ, ರಾಜಕೀಯ ಅಭಿವೃದ್ಧಿಗೆ ಶ್ರಮಿಸುವುದು ಸಂಘಟನೆಯ ಗುರಿಯಾಗಿದೆ ಎಂದು ಶಬೀರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ನಾಸಿರ್, ಉಪಾಧ್ಯಕ್ಷರಾದ ಸಲೀಂ ಸಿ.ಎಂ., ಸಂಶುದ್ದೀನ್ ಕುಕ್ಕಾಜೆ, ಕಾರ್ಯದರ್ಶಿಗಳಾದ ಇರ್ಷಾದ್ ಬಜಾಲ್, ಬಶೀರ್ ಅಡ್ಯನಡ್ಕ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News