ಬೆಳಗಾವಿ ಅಧಿವೇಶನ | 5,317 ಕೋಟಿ ರೂ.ಗಳ ಪೂರಕ ಅಂದಾಜು ಬೇಡಿಕೆಗೆ ಒಪ್ಪಿಗೆ : ಧನವಿನಿಯೋಗ ವಿಧೇಯಕ-2024ಕ್ಕೆ ಅಂಗೀಕಾರ
ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡನೆ ಮಾಡಿದ 5317.83 ಕೋಟಿ ರೂ.ಗಳ ಪೂರಕ ಅಂದಾಜುಗಳ ಎರಡನೇ ಕಂತಿನ ಬೇಡಿಕೆಗೆ ಮಂಗಳವಾರ ವಿಧಾನಸಭೆಯಲ್ಲಿ ಒಪ್ಪಿಗೆ ದೊರೆಯಿತು. ಇದರ ಅಂಗವಾಗಿ ಕರ್ನಾಟಕ ಧನವಿನಿಯೋಗ(ಸಂಖ್ಯೆ-5) ವಿಧೇಯಕ 2024 ಅಂಗೀಕಾರವಾಯಿತು.
ಪೂರಕ ಅಂದಾಜುಗಳ ಬೇಡಿಕೆ ಕುರಿತು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಧನ ವಿನಿಯೋಗ ಅಧಿನಿಯಮದ ಆಧಾರದಲ್ಲಿ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹೊಸ ಸೇವೆ ಹಾಗೂ ವಿವಿಧ ಇಲಾಖೆಗಳಿಗೆ ಹೆಚ್ಚಿನ ಪೂರಕ ಅನುದಾನ ಅಥವಾ ಹೆಚ್ಚಿನ ವೆಚ್ಚವನ್ನು ಭರಿಸುವ ಸಲುವಾಗಿ ರಾಜ್ಯ ವಿಧಾನ ಮಂಡಲದ ಮುಂದೆ ಸಂವಿಧಾನದ 205(1)(ಎ)ರ ಅನುಚ್ಛೇದಲ್ಲಿ ನೀಡಿರುವ ಅವಕಾಶ ಬಳಸಿಕೊಂಡು 2024-25ನೇ ಸಾಲಿನ ಪೂರಕ ಅಂದಾಜುಗಳ ಎರಡನೇ ಕಂತಿನ ಬೇಡಿಕೆಗಳನ್ನು ಮಂಡಿಸಲಾಗಿದೆ ಎಂದು ಹೇಳಿದರು.
ಈ ಪೂರಕ ಅಂದಾಜು ಮೂಲ ಆಯವ್ಯಯ ಗಾತ್ರದ ಶೇ.1.39 ರಷ್ಟಿದೆ. 5317.83 ಕೋಟಿ ರೂ. ಪೂರಕ ಅಂದಾಜಿನಲ್ಲಿ ರಾಜಸ್ವ ವೆಚ್ಚ 2540.17 ಕೋಟಿ ರೂ. ಹಾಗೂ ಬಂಡವಾಳ ವೆಚ್ಚ 2777.66 ಕೋಟಿ ರೂ. ಸೇರಿದೆ. ಪೂರಕ ಅಂದಾಜಿಗೆ ವ್ಯಯಿಸುವ ಹಣದಲ್ಲಿ 2304.95 ಕೋಟಿ ರೂ. ರಾಜಸ್ವ ಸ್ವೀಕೃತ ನಿಧಿ ಹಾಗೂ 1199.94 ಕೋಟಿ ರೂ. ಕೇಂದ್ರ ಸಹಾಯದ ಮೊತ್ತಗಳು ಸೇರಿವೆ. ಉಳಿದ 1812.94 ಕೋಟಿ ರೂ. ನಿವ್ವಳ ನಗದು ಮೊತ್ತವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಗ್ರಾಮೀಣ ರಸ್ತೆಗಳಿಗೆ 500 ಕೋಟಿ ರೂ., ಫೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ 456 ಕೋಟಿ ರೂ., ಗ್ರಾಮ ಪಂಚಾಯಿತಿಗಳ ವಿದ್ಯುತ್ ಬಾಕಿ ಮೊತ್ತ ಪಾವತಿಸಲು 400 ಕೋಟಿ ರೂ., ಜಿಲ್ಲಾ ರಸ್ತೆಗಳ ಅಭಿವೃದ್ಧಿಗೆ 393 ಕೋಟಿ ರೂ., ವಸತಿ ಶಾಲೆಗಳಿಗೆ 250 ಕೋಟಿ ರೂ., ಪರಿಶಿಷ್ಟ ಜಾತಿಗಳ ಅಭಿವೃದ್ಧಿಗೆ 241 ಕೋಟಿ ರೂ., ಪಿ.ಎಂ.ಆವಾಸ್ ಯೋಜನೆ(ಗ್ರಾಮೀಣ)ಗೆ 218 ಕೋಟಿ ರೂ., ಹಾಲು ಉತ್ಪಾದಕರ ಸಹಾಯಕ ಧನಕ್ಕೆ 100 ಕೋಟಿ ರೂ.ಸೇರಿದಂತೆ ವಿವಿಧ ಇಲಾಖೆಗಳಿಗೆ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ನಂತರ ಪೂರಕ ಅಂದಾಜು ಬೇಡಿಕೆ ಹಾಗೂ ಕರ್ನಾಟಕ ಧನವಿನಯೋಗ(ಸಂಖ್ಯೆ-5)ವಿಧೇಯಕ-2024ಕ್ಕೆ ವಿಧಾನ ಸಭೆಯಲ್ಲಿ ಧ್ವನಿಮತದ ಅಂಗೀಕಾರ ಲಭಿಸಿತು.