‘ಕಾವೇರಿ ಆರತಿ’ | ಹರಿದ್ವಾರ, ವಾರಣಾಸಿಗೆ ಕೃಷಿ ಸಚಿವರ ನೇತೃತ್ವದಲ್ಲಿ ಅಧ್ಯಯನ ಪ್ರವಾಸ
ಬೆಂಗಳೂರು : ಗಂಗಾ ನದಿಗೆ ಮಾಡಲಾಗುವ ಗಂಗಾ ಆರತಿ ಮಾದರಿ ಕಾವೇರಿ ನದಿಗೆ ‘ಕಾವೇರಿ ಆರತಿ’ ಮಾಡುವ ಕಾರ್ಯಕ್ರಮದ ರೂಪುರೇಷೇಗಳ ಕುರಿತು ಅವಲೋಕಿಸಿ ಅಧ್ಯಯನ ನಡೆಸಲು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಶಾಸಕರು ಮತ್ತು ಅಧಿಕಾರಿಗಳನ್ನೊಳಗೊಂಡ ನಿಯೋಗ ನಾಳೆ(ಸೆ.20)ಯಿಂದ ಎರಡು ದಿನ ವಾರಣಾಸಿ ಮತ್ತು ಹರಿದ್ವಾರಕ್ಕೆ ಭೇಟಿ ನೀಡಲಿದೆ.
ಕಾವೇರಿ ಆರತಿ ಕಾರ್ಯಕ್ರಮದ ಅಧ್ಯಕ್ಷರೂ ಆಗಿರುವ ಸಚಿವ ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಶಾಸಕರು, ಪರಿಷತ್ ಸದಸ್ಯರು, ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ನಿಯೋಗ ಹರಿದ್ವಾರ ಮತ್ತು ವಾರಣಾಸಿಗೆ ನಾಳೆ ಬೆಳಗ್ಗೆ ಭೇಟಿ ನೀಡಲಿದೆ ಎಂದು ತಿಳಿಸಲಾಗಿದೆ.
ಎರಡು ದಿನಗಳ ಪ್ರವಾಸ: ಕೃಷಿ ಸಚಿವ ಚಲುವರಾಯಸ್ವಾಮಿ, ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ರವಿಕುಮಾರ್, ಕೆ.ಎಂ.ಉದಯ್, ದಿನೇಶ್ ಗೂಳಿಗೌಡ, ಬಾಲಕೃಷ್ಣ, ಹರೀಶ್ ಗೌಡ, ದರ್ಶನ್ ಧೃವನಾರಾಯಣ್, ಶಿವಲಿಂಗೇಗೌಡ, ಕೃಷ್ಣಮೂರ್ತಿ, ಪರಿಷತ್ ಮಾಜಿ ಸದಸ್ಯ ಅಪ್ಪಾಜಿಗೌಡ, ಮಂಡ್ಯ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ವೆಂಕಟರಮಣೇಗೌಡ (ಸ್ಟಾರ್ ಚಂದ್ರು), ಮಾಜಿ ಶಾಸಕ ರಾಜು ಹಾಗೂ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಜಲಸಂಪನ್ಮೂಲ ಸಚಿವರ ಸಲಹೆಗಾರ ಜಯಪ್ರಕಾಶ್ ಅವರ ನಿಯೋಗ ಪ್ರವಾಸ ಕೈಗೊಂಡಿದೆ.
ನಿಯೋಗವು ಸೆ.20ರ ಶುಕ್ರವಾರ ರಾತ್ರಿ ಹರಿದ್ವಾರದಲ್ಲಿ ಗಂಗಾ ನದಿಗೆ ಆರತಿ ಮಾಡುವುದನ್ನು ವೀಕ್ಷಣೆ ಮಾಡಲಿದೆ. ಸೆ.21ರ ಶನಿವಾರದಂದು ವಾರಣಾಸಿಗೆ ತೆರಳಿ ಗಂಗಾ ಆರತಿಗೆ ಪ್ರಸಿದ್ಧ ಹಾಗೂ ಪವಿತ್ರ ಘಾಟ್ ಆದ ದಶಾಸ್ವಮೇಧ ಘಾಟ್‍ನಲ್ಲಿ ಗಂಗಾ ಆರತಿಯನ್ನು ವೀಕ್ಷಣೆ ಮಾಡಲಿದೆ. ಸೆ.22ರ ರವಿವಾರ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡುವುದರ ಜೊತೆಗೆ ಘಾಟ್‍ನಲ್ಲಿ ಸಂಚರಿಸಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ರಾಜ್ಯಕ್ಕೆ ವಾಪಸಾಗಲಿದೆ.