ಕಾಂಗ್ರೆಸ್ ಸರಕಾರದ ಗೊಡ್ಡು ಬೆದರಿಕೆಗೆ ನಾವು ಹೆದರಲ್ಲ : ಆರ್.ಅಶೋಕ್
ಬೆಂಗಳೂರು : ಕಾಂಗ್ರೆಸ್ ಸರಕಾರ ನಮ್ಮ ಯಾವುದೇ ಕಾರಣಕ್ಕೂ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಸರಕಾರದ ಗೊಡ್ಡು ಬೆದರಿಕೆಗೆ ನಾವು ಹೆದರಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರತಿಕ್ರಿಯಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾಗಮಂಗಲದ ಗಲಭೆ ವಿಚಾರದಲ್ಲಿ ಸರಿಯಾಗಿ ತನಿಖೆ ಮಾಡಿ ಎಂದು ಸರಕಾರಕ್ಕೆ ಆಗ್ರಹಿಸಿದ್ದೆ. ಜನರು ಹೇಳಿದ್ದನ್ನು ಕೇಳಿ ಹಾಗೆ ಟ್ವೀಟ್ ಮಾಡಿದ್ದೆ. ವಿಧಾನಸೌಧದಲ್ಲಿ ‘ಪಾಕಿಸ್ತಾನ್ ಝಿಂದಾಬಾದ್’ ಘೋಷಣೆ ಕೂಗಿದ್ದನ್ನು ಸುಳ್ಳು ಎಂದು ಸಚಿವರೇ ಹೇಳಿದ್ದರು. ಬಳಿಕ ಅದು ನಿಜ ಎಂದು ಸಾಬೀತಾಯಿತು. ಹಾಗಾದರೆ ಸಚಿವರ ವಿರುದ್ಧ ಎಫ್‍ಐಆರ್ ದಾಖಲಿಸಬೇಡವೇ ಎಂದು ಪ್ರಶ್ನೆ ಮಾಡಿದರು.
ವಿಪಕ್ಷ ನಾಯಕನಾಗಿ ತನಿಖೆ ಮಾಡಿ ಎಂದು ಸರಕಾರಕ್ಕೆ ಆಗ್ರಹಿಸಿದ್ದೇನೆ. ಸರಕಾರದಿಂದ ನನ್ನ ಬಾಯಿ ಮುಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಎಲ್ಲ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸಿ ವಿಪಕ್ಷವನ್ನು ಬಗ್ಗುಬಡಿಯಬೇಕೆಂದು ಸರಕಾರ ನಿರ್ಧಾರ ಮಾಡಿದೆ. ಪಾಕ್ ಝಿಂದಾಬಾದ್ ಕುರಿತು ಸುಳ್ಳು ಸುದ್ದಿ ಹಬ್ಬಿಸಿದ ಸಚಿವರು ರಾಜೀನಾಮೆ ನೀಡಬೇಕಿತ್ತು. ಹಾಗಾದರೆ ವಿಪಕ್ಷವಾಗಿ ನಾವು ಏನು ಮಾಡಬೇಕು? ಎಂದು ಅವರು ಪ್ರಶ್ನಿಸಿದರು.
ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಜಾರಿ ಮಾಡಲು ಕಾಂಗ್ರೆಸ್ ಮುಂದಾಗಿದೆ. ಆದರೆ, ನಮ್ಮ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಇದರ ವಿರುದ್ಧ ಹೋರಾಟ ಮಾಡುತ್ತೇವೆ. ಪೊಲೀಸರನ್ನು ಬೊಂಬೆಯಂತೆ ಆಡಿಸುತ್ತಿದ್ದಾರೆ. ಈ ಸರಕಾರ ರಾಜ್ಯಪಾಲರನ್ನೂ ಬಿಟ್ಟಿಲ್ಲ. ಅವರ ಮೇಲೂ ಗದಾ ಪ್ರಹಾರ ಮಾಡಲಾಗುತ್ತಿದೆ. ವಿಶ್ವ ವಿದ್ಯಾಲಯದಲ್ಲಿ ರಾಜ್ಯಪಾಲರ ಅಧಿಕಾರ ಕಸಿಯಲು ಸರಕಾರ ಮುಂದಾಗಿದೆ. ನಾವು ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಿದ್ದೆವು. ಹೀಗಾಗಿ ಈ ಸರಕಾರದ ಗೊಡ್ಡು ಬೆದರಿಕೆಗೆ ಹೆದರಲ್ಲ ಎಂದು ಎಚ್ಚರಿಸಿದರು.