ಬೆಂಗಳೂರು: ಸ್ನೇಹಿತನನ್ನು ಕೊಲೆಗೈದಿದ್ದ ಇಬ್ಬರು ಆರೋಪಿಗಳ ಬಂಧನ

Update: 2023-11-18 18:05 GMT

ಬೆಂಗಳೂರು: ಕಿಚಾಯಿಸುತ್ತಿರುತ್ತಾನೆ ಎಂಬ ಕಾರಣಕ್ಕೆ ಸ್ನೇಹಿತನನ್ನೇ ಕೊಲೆಗೈದಿದ್ದ ಇಬ್ಬರು ಆರೋಪಿಗಳನ್ನು ಇಲ್ಲಿನ ಕೊತ್ತನೂರು ಠಾಣಾ ಪೊಲೀಸರು ಬಂಧಿಸಿರುವುದು ವರದಿಯಾಗಿದೆ.

ಲಕ್ಷ್ಮಣ್ ಮಾಂಜಿ(22) ಎಂಬುವನನ್ನು ಕೊಲೆಗೈದು ಪರಾರಿಯಾಗಲು ಯತ್ನಿಸುತ್ತಿದ್ದ ಜಗದೇವ್ ಹಾಗೂ ಚಂದನ್ ಕುಮಾರ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ನ.16ರಂದು ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಕ್ಯಾಲಸನಹಳ್ಳಿಯ ಖಾಲಿ ಜಾಗದ ಪೊದೆಗಳ ನಡುವೆ ಮೃತದೇಹ ಪತ್ತೆಯಾಗಿತ್ತು. ಹತ್ಯೆಯಾದ ಲಕ್ಷ್ಮಣ್ ಮಾಂಜಿ ಹಾಗೂ ಆರೋಪಿಗಳು ಜಾರ್ಖಂಡ್ ಮೂಲದವರಾಗಿದ್ದು, ಇತ್ತೀಚೆಗೆ ಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ ಬಂದು ವಾಸವಿದ್ದರು.

ಮಾತಿನ ಮಧ್ಯೆ ಸ್ನೇಹಿತರ ಕಾಲೆಳೆಯುವ ಸ್ವಭಾವ ಹೊಂದಿದ್ದ ಲಕ್ಷ್ಮಣ್, ನ.16ರಂದು ರಾತ್ರಿ ಸಹ ಸ್ನೇಹಿತರೊಂದಿಗೆ ಪಾರ್ಟಿಗೆ ಕುಳಿತಾಗಲೂ ಸ್ನೇಹಿತರಿಬ್ಬರನ್ನೂ ಕಿಚಾಯಿಸಿದ್ದ. ಈ ವೇಳೆ ಆರೋಪಿಗಳು ಹಾಗೂ ಲಕ್ಷ್ಮಣ್ ನಡುವೆ ಜಗಳವಾಗಿತ್ತು. ನಂತರ ಮದ್ಯದ ಅಮಲಿನಲ್ಲಿದ್ದ ಲಕ್ಷ್ಮಣ್ನನ್ನು ಆರೋಪಿಗಳು ಮನೆಯ ಹೊರಗೆ ಕರೆತಂದಿದ್ದರು. ಆತನನ್ನು ಸಮೀಪದಲ್ಲಿದ್ದ ಖಾಲಿ ಜಮೀನಿಗೆ ಕರೆದೊಯ್ದು ಕೋಪದಲ್ಲಿ ಇಟ್ಟಿಗೆಯಿಂದ ಆತನ ತಲೆಗೆ ಹೊಡೆದು ಕೊಲೆಗೈದಿದ್ದರು. ಬಳಿಕ ಮನೆಗೆ ಬಂದು ವಾಪಾಸ್ ಜಾರ್ಖಂಟಡ್‌ ಗೆ ತೆರಳಲು ಸಿದ್ಧತೆ ಆರಂಭಿಸಿದ್ದರು.

ಖಾಲಿ ಜಮೀನಿನಲ್ಲಿ ಪತ್ತೆಯಾಗಿದ್ದ ಶವದ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಕೊತ್ತನೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅಶ್ವಥ್ ನಾರಾಯಣಸ್ವಾಮಿ ನೇತೃತ್ವದ ತಂಡ ಕಾರ್ಯಾಚರಣೆ ಕೈಗೊಂಡು, ಕೃತ್ಯದ ನಂತರ ರೈಲಿನ ಮೂಲಕ ಪರಾರಿಯಾಗಲು ಯತ್ನಿಸುತ್ತಿದ್ದ ಜಗದೇವ್ ಹಾಗೂ ಚಂದನ್ ಕುಮಾರ್ನನ್ನು ಬಂಧಿಸಿದ್ದು ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News