ನಾಪತ್ತೆಯಾಗಿದ್ದ ಬೆಂಗಳೂರಿನ ಬಾಲಕ ಮೂರು ದಿನಗಳ ನಂತರ ಹೈದರಾಬಾದ್ ನಲ್ಲಿ ಪತ್ತೆ

Update: 2024-01-24 06:37 GMT

ಬೆಂಗಳೂರು: ರವಿವಾರ ಬೆಂಗಳೂರಿನಿಂದ ನಾಪತ್ತೆಯಾಗಿದ್ದ 12 ವರ್ಷದ ಬಾಲಕ ಇಂದು ಬೆಳಗ್ಗೆ ಹೈದರಾಬಾದ್ ನ ಮೆಟ್ರೊ ನಿಲ್ದಾಣದ ಬಳಿ ಪತ್ತೆಯಾಗಿದ್ದಾನೆ. ಆತನ ನಾಪತ್ತೆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಮನವಿ ಮಾಡಿಕೊಂಡಿದ್ದರಿಂದ, ಆತನ ಪತ್ತೆಗಾಗಿ ವ್ಯಾಪಕ ಶೋಧ ನಡೆದಿತ್ತು.

ಕಳೆದ ಮೂರು ದಿನಗಳಿಂದ ಶೋಧ ನಡೆಸುತ್ತಿರುವ ಪೊಲೀಸರ ಹಿಡಿತದಿಂದ ತಪ್ಪಿಸಿಕೊಳ್ಳುವಲ್ಲಿ ಆರನೆ ತರಗತಿಯ ಪರಿಣವ್ ಯಶಸ್ವಿಯಾಗಿದ್ದ. ಆತನ ಸುಳಿವು ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸುತ್ತಿದ್ದಂತೆಯೆ ಆತ ಮತ್ತೊಂದು ಜಾಗಕ್ಕೆ ತನ್ನ ವಾಸ್ತವ್ಯ ಬದಲಿಸಿದ್ದ.

ಆತ ಮೊದಲು ವೈಟ್ ಫೀಲ್ಡ್ ನಲ್ಲಿರುವ ಕೋಚಿಂಗ್‌ ಸೆಂಟರ್‌ ಅನ್ನು 11 ಗಂಟೆಗೆ ತೊರೆದಿದ್ದ ಹಾಗೂ ನಂತರ ಮಧ್ಯಾಹ್ನ 3 ಗಂಟೆಗೆ ಯಮಲೂರು ಬಳಿಯ ಪೆಟ್ರೋಲ್ ಪಂಪ್ ಒಂದರ ಬಳಿ ಕಂಡು ಬಂದಿದ್ದ. ನಂತರ ಆತ ಸಂಜೆ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಸ್ ನಿಂದ ಇಳಿಯುತ್ತಿರುವುದು ಕಂಡು ಬಂದಿತ್ತು.

ತಮ್ಮ ಪುತ್ರನನ್ನು ಪತ್ತೆ ಹಚ್ಚಲು ಪೋಷಕರು ಸಾಮಾಜಿಕ ಮಾಧ್ಯಮದ ಮೊರೆ ಹೋಗಿದ್ದರು. ಪುತ್ರ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಿಸಿಟಿವಿ ತುಣುಕನ್ನು ಸಾಮಾಜಿಕ ಮಾಧ‍್ಯಮ ಪೋಸ್ಟ್ ನಲ್ಲಿ ಲಗತ್ತಿಸಿ, ಪುತ್ರನ ಪತ್ತೆಗೆ ಬಾಲಕ ಪೋಷಕರು ನೆರವು ಯಾಚಿಸಿದ್ದರು.

ಈ ಪೋಸ್ಟ್ ನ ಕಾರಣಕ್ಕೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಬಾಲಕನಿಗಾಗಿ ತೀವ್ರ ಶೋಧ ನಡೆಸಿದ್ದರು. ಈ ಪೈಕಿ ಕೆಲವರು ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ವೈಯಕ್ತಿಕವಾಗಿಯೂ ಭೇಟಿ ನೀಡಿದ್ದರು. ಇದರೊಂದಿಗೆ ಬಾಲಕನ ತಾಯಿಯು ತಮ್ಮ ಪುತ್ರನಿಗೆ ಮನೆಗೆ ಮರಳುವಂತೆ ಮನವಿ ಮಾಡಿರುವ ವಿಡಿಯೊವೊಂದನ್ನೂ ಪೋಸ್ಟ್ ಮಾಡಿದ್ದರು.

ಆತನ ಭಿತ್ತಿ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು. ಇದರಿಂದ ಪ್ರಯಾಣಿಕರು ಬಾಲಕನನ್ನು ಮೆಟ್ರೊದಲ್ಲಿ ಪತ್ತೆ ಹಚ್ಚಲು ಸಾಧ್ಯವಾಗಿತ್ತು. ಆತನನ್ನು ವಿಚಾರಣೆಗೊಳಪಡಿಸಿದಾಗ ಆತ ತನ್ನ ಗುರುತನ್ನು ದೃಢಪಡಿಸಿದ್ದಾನೆ. ಆತನನ್ನು ಹೈದರಾಬಾದಿನ ನಂಪಲ್ಲಿ ಮೆಟ್ರೊ ನಿಲ್ದಾಣದಲ್ಲಿ ನಾಪತ್ತೆಯಾದ ಮೂರು ದಿನಗಳ ನಂತರ ಬುಧವಾರ ಪತ್ತೆ ಹಚ್ಚಲಾಗಿದೆ.

ಈ ಕುರಿತು ಬಾಲಕನ ಪೋಷಕರಿಗೆ ಮಾಹಿತಿ ನೀಡಲಾಗಿದ್ದು, ಅವರು ಹೈದರಾಬಾದ್ ಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News