ಬೆಂಗಳೂರು: ಮೆಟ್ರೋದಲ್ಲಿ ಹೃದಯಾಘಾತದಿಂದ ಪ್ರಯಾಣಿಕ ಮೃತ್ಯು
ಬೆಂಗಳೂರು, ಜುಲೈ 26: ಮೆಟ್ರೋ ರೈಲಿನಲ್ಲಿ ಓರ್ವ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ವಿಫಲವಾದ ಆರೋಪದ ಮೇಲೆ ಬೈಯಪ್ಪನಹಳ್ಳಿ ಪೊಲೀಸರು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‍ಸಿಎಲ್) ಮುಖ್ಯ ಭದ್ರತಾ ಅಧಿಕಾರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಈ ಪ್ರಕರಣ ಕುರಿತು ಬಿಎಂಆರ್‍ಸಿಎಲ್ ಮುಖ್ಯ ಭದ್ರತಾ ಅಧಿಕಾರಿ ಉತ್ತರಿಸುವಂತೆ ಬೈಯಪ್ಪನಹಳ್ಳಿ ಪೊಲೀಸರು ನೋಟಿಸ್‍ನಲ್ಲಿ ತಿಳಿಸಿದ್ದಾರೆ. ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ರೈಲು ಹತ್ತಿದ್ದ ತಿಮ್ಮೇಗೌಡ(67) ಎಂಬುವವರಿಗೆ ಸ್ವಾಮಿವಿವೇಕಾನಂದ ಮೆಟ್ರೋ ನಿಲ್ದಾಣ ತಲುಪುವ ವೇಳೆಗೆ ತೀವ್ರ ಎದೆ ನೋವು ಕಾಣಿಸಿಕೊಂಡಿದೆ.
ರೈಲು ಎಂ.ಜಿ. ರಸ್ತೆ ನಿಲ್ದಾಣಕ್ಕೆ ಬಂದಾಗ ಸಾರ್ವಜನಿಕರು ಸಹಾಯಕ್ಕೆ ಧಾವಿಸಿದ್ದು, ರೈಲಿನಿಂದ ವ್ಯಕ್ತಿಯನ್ನು ಹೊರಗೆ ಕರೆತಂದು ಫ್ಲಾಟ್ ಫಾರಂನಲ್ಲಿ ಕೂರಿಸಿದ್ದಾರೆ. ಸುಮಾರು 14 ನಿಮಿಷಗಳ ಕಾಲ ವ್ಯಕ್ತಿಯು ಫ್ಲಾಟ್ ಫಾರಂನಲ್ಲೇ ತೀವ್ರ ಎದೆನೋವು ಅನುಭವಿಸಿದ್ದು, ತಕ್ಷಣಕ್ಕೆ ಅಲ್ಲಿನ ಸಿಬ್ಬಂದಿಯಾಗಲಿ, ಅಧಿಕಾರಿಗಳಾಗಲಿ ಯಾರೂ ಈ ಬಗ್ಗೆ ಗಮನಿಸದೆ, ಘಟನೆ ಬಗ್ಗೆ ಮಾಹಿತಿ ಕಲೆ ಹಾಕದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಪ್ರಯಾಣಿಕರೊಬ್ಬರು ಬಿಎಂಆರ್‍ಸಿಎಸ್ ವಿರುದ್ಧ ದೂರು ನೀಡಿದ್ದಾರೆ.
ಈ ಪ್ರಕರಣದ ಕುರಿತು ಬೈಯಪ್ಪನಹಳ್ಳಿ ಪೊಲೀಸರು, ಬಿಎಂಆರ್‍ಸಿಎಲ್ ಅಧಿಕಾರಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿ ಕ್ರಮ ಜರುಗಿಸಿದ್ದಾರೆ.