ಓಟ್ ಬ್ಯಾಂಕ್ ರಾಜಕೀಯ ಮಾಡಲು ಬಿಜೆಪಿಯಿಂದ ಹಿಂದೂ ರಾಷ್ಟ್ರ ಜಪ: ಸಚಿವ ತಂಗಡಗಿ
ಗಂಗಾವತಿ: ಬಿಜೆಪಿ ಮುಖಂಡರು ಓಟ್ ಬ್ಯಾಂಕ್ ರಾಜಕೀಯ ಮಾಡಲು ಹಿಂದೂ ರಾಷ್ಟ್ರ ಜಪ ಮಾಡುತ್ತಿದ್ದಾರೆ ಎಂದು ಕನ್ನಡ ಸಂಸ್ಕೃತಿ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್ ತಂಗಡಗಿ ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವಿರಾರು ವರ್ಷ ಭಾರತವನ್ನು ಆಳಿದ ಮುಸ್ಲಿಂ ಹಾಗೂ ಕ್ರೈಸರಿಗೆ ಅವರವರ ಧರ್ಮದ ದೇಶ ಮಾಡಲು ಸಾಧ್ಯವಾಗಿಲ್ಲ. ಹಲವು ಸಂಸ್ಕೃತಿ, ಜಾತಿ, ಭಾಷೆ, ಪ್ರಾಂತ್ಯವುಳ್ಳ ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಬಿಜೆಪಿಯವರ ಯತ್ನ ಕಾರ್ಯ ಸಾಧ್ಯವಲ್ಲ ಎಂದರು.
ಹಿರಿಯರ ತ್ಯಾಗ ಬಲಿದಾನದಿಂದಾಗಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಶ್ರೇಷ್ಠ ಸಂವಿಧಾನದ ಮೂಲಕ ಅಂಬೇಡ್ಕರ್ ಅವರು ವಿವಿಧತೆಯಲ್ಲಿ ಏಕತೆ ಸಾರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದೇಶದಅನುಷ್ಠಾನ ಮಾಡಿದ್ದಾರೆ ಎಂದರು.
ಸಂಸತ್ತಿನ ಮೇಲೆ ಬಿಜೆಪಿ ಆಡಳಿತ ಅವಧಿಯಲ್ಲಿ ದಾಳಿ ನಡೆದರೂ ಪ್ರಧಾನಿ ಮೋದಿ, ಗೃಹ ಸಚಿವರು, ರಕ್ಷಣಾ ಸಚಿವರು ಪಾರ್ಲಿಮೆಂಟ್ ನಲ್ಲಿ ಮಾತನಾಡಿಲ್ಲ. ದೇಶದೊಳಗೆ ನೂರಾರು ಕೆಜಿ ಆರ್ ಡಿ ಎಕ್ಸ್ ಪೂರೈಕೆ ಮಾಡಿದರೂ ಸೈನಿಕರು ಹುತಾತ್ಮರಾದರೂ ಆ ಬಗ್ಗೆ ಪಾರ್ಲಿಮೆಂಟ್ ನಲ್ಲಿ ಹಾಗೂ ಪತ್ರಿಕಾ ಮಾಧ್ಯಮವರ ಜತೆ ಪ್ರಧಾನಿ ಮಾತನಾಡಿಲ್ಲ. ಇಂತಹ ಬಿಜೆಪಿಯವರಿಗೆ ದೇಶ ಜನತೆಯ ಬಗ್ಗೆ ಗೌರವವಿಲ್ಲ ಎಂದು ಹೇಳಿದರು.
ಅಧಿಕಾರದ ಆಸೆಯಿಂದ ಧರ್ಮ, ಜಾತಿ, ಶ್ರೀ ರಾಮ, ಆಂಜನೇಯ ಎಂದು ಸುಳ್ಳು ಭಾಷಣ ಮಾಡುತ್ತಿದ್ದಾರೆ. ಬಿಜೆಪಿಯವರ ಕನಸು ನನಸಾಗುವುದಿಲ್ಲ. ದೇಶದ ಜನರ ಬಡತನ, ನಿರುದ್ಯೋಗ, ಮನೆ, ಶಿಕ್ಷಣ, ಆರೋಗ್ಯ, ಒಕ್ಕೂಟ ವ್ಯವಸ್ಥೆ ಮಾಡುವ ಬಗ್ಗೆ ಬಿಜೆಪಿಯವರು ಎಂದಿಗೂ ಮಾತನಾಡಿಲ್ಲ ಎಂದರು.