ಝಮೀರ್ ಅಹ್ಮದ್‍ರನ್ನು ಸಂಪುಟದಿಂದ ವಜಾ ಮಾಡಲು ಬಿಜೆಪಿ ಆಗ್ರಹ
ಬೆಂಗಳೂರು : ರೈತರ ಜಮೀನನ್ನು ವಕ್ಫ್‌ಗೆ ಹಸ್ತಾಂತರ ಮಾಡಲಾಗುತ್ತಿದೆ. ನೋಟಿಸ್ ಕೊಡುವ ಮೂಲಕ, ಪಹಣಿ ಮಾಡುವ ಮೂಲಕ ಜನರ, ರೈತರ ಹಕ್ಕು ಮೊಟಕುಗೊಳಿಸುವ ಹುನ್ನಾರ ಮತ್ತು ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರಕಾರದ ಪ್ರಯತ್ನ ಖಂಡನೀಯ ಎಂದು ಮಾಜಿ ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಟೀಕಿಸಿದ್ದಾರೆ.
ಶುಕ್ರವಾರ ಇಲ್ಲಿನ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ವಕ್ಫ್ ಆಸ್ತಿ ಎಂಬ ಗೆಜೆಟ್ ಪ್ರಕಟಣೆಯನ್ನೂ ರದ್ದು ಪಡಿಸಬೇಕು. ಝಮೀರ್ ಅಹ್ಮದ್ ಖಾನ್‍ರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು. ಝಮೀರ್ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿದರು.
ವಿಜಯಪುರ ಜಿಲ್ಲೆಯಲ್ಲಿ ರೈತರ ಹೆಸರಿನಲ್ಲಿದ್ದ ಪಹಣಿಗಳನ್ನು ವಕ್ಫ್ ಹೆಸರಿಗೆ ಬದಲಿಸಿದ್ದಾರೆ. ಝಮೀರ್ ಮಾತಿನ ಧಾಟಿ, ಹಾವಭಾವಗಳನ್ನು ನೋಡಿದರೆ ಒಂದೇ ಸಾರಿ ನಮ್ಮನ್ನೆಲ್ಲ ನಿರ್ನಾಮ ಮಾಡಿ, ಓಡಿಸಿ ನೆಲಸಮ ಮಾಡುವಂತಹ ರೀತಿಯಲ್ಲಿ ಇದೆ. ವಕ್ಫ್ ಆಸ್ತಿ ಎನ್ನಲಾದ ಜಾಗ ಬಳಸುತ್ತಿರುವ ನಮ್ಮನ್ನೆಲ್ಲ ಸೈತಾನರೆಂದು ಹೇಳಿದ್ದಾರೆ ಎಂದು ಟೀಕಿಸಿದರು.
ಈ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೂಚನೆ-ಬೆಂಬಲ ಇದೆ ಎಂದು ತಿಳಿಸಿದ ಝಮೀರ್ ಅವರು ಬಹುಸಂಖ್ಯಾತರು ಮತ್ತು ರೈತರ ವಿರುದ್ಧವಾಗಿ ವಕ್ಫ್ ಹೆಸರಿನಲ್ಲಿ ಜಮೀನುಗಳನ್ನು ಕಬಳಿಸುತ್ತಿದ್ದಾರೆ. ನಾಮಕಾವಾಸ್ತೆ ಅದಾಲತ್ ಮೂಲಕ ವಕ್ಫ್ ಆಸ್ತಿ ಎಂದು ಘೋಷಿಸಲು ಝಮೀರ್ ಹೊರಟಿದ್ದಾರೆ ಎಂದು ದೂರಿದರು.