ಹತಾಶ ಸ್ಥಿತಿಗೆ ತಲುಪಿರುವ ಬಿಜೆಪಿಗೆ ಯಾವ ಭವಿಷ್ಯವೂ ಇಲ್ಲ: ಎಂ ಬಿ ಪಾಟೀಲ್
ಬೆಂಗಳೂರು: ಚುನಾವಣೆ ಮುಗಿದು ಐದಾರು ತಿಂಗಳಾದರೂ ಬಿಜೆಪಿಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಆಗಿಲ್ಲ. ಜನರಿಂದ ತಿರಸ್ಕೃತವಾಗಿರುವ ಆ ಪಕ್ಷವು ಈಗಾಗಲೇ ಮುಳುಗಿ ಹೋಗಿರುವ ಹಡಗು. ಸಂಪೂರ್ಣ ಹತಾಶ ಸ್ಥಿತಿ ತಲುಪಿರುವ ಪಕ್ಷಕ್ಕೆ ಯಾವ ಭವಿಷ್ಯವೂ ಇಲ್ಲ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಟೀಕಿಸಿದ್ದಾರೆ.
ಇಲ್ಲಿನ ತಮ್ಮ ನಿವಾಸದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರವು ಕೇವಲ ನೂರು ದಿನಗಳಲ್ಲಿ ಮಾಡಿರುವ ಸಾಧನೆ ಕಂಡು ಪ್ರಧಾನಿ ಮೋದಿ ಕೂಡ ನಿರುತ್ತರರಾಗಿದ್ದಾರೆ ಎಂದರು.
ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಖಾಲಿಯಾಗುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಏನಾದರೂ ಮಾಡಿಕೊಳ್ಳಲಿ. ಇದರಿಂದ ಸೆಕ್ಯುಲರ್ ಎನ್ನುವ ಹೆಸರು ಇಟ್ಟುಕೊಂಡಿರುವ ಜೆಡಿಎಸ್ ಬಣ್ಣವೂ ಬಯಲಾಗಲಿದೆ. ನಾವು ಏಕಾಂಗಿಯಾಗಿ ರಾಜ್ಯದಲ್ಲಿ ಕನಿಷ್ಠಪಕ್ಷ 20 ಸ್ಥಾನಗಳನ್ನಾದರೂ ಗೆಲ್ಲಲಿದ್ದೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಯಡಿಯೂರಪ್ಪ ಅವರಂತಹ ಹಿರಿಯರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ. ಇದು ಅವರಿಗೂ ಗೊತ್ತು. ಆದರೂ ಅವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಆ ಪಕ್ಷದ 25 ಸಂಸದರು ರಾಜ್ಯಕ್ಕೆ ನ್ಯಾಯ ಕೊಡಿಸಬೇಕು. ಆದರೆ ಅವರೆಲ್ಲ ಮೋದಿಯವರಿಗೆ ಹೆದರಿಕೊಂಡು ತುಟಿ ಬಿಚ್ಚುತ್ತಿಲ್ಲ ಎಂದು ಅವರು ಪ್ರತಿಪಾದಿಸಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೆಆರ್ ಎಸ್ ಗೆ ಭೇಟಿ ನೀಡುತ್ತಿರುವುದರ ಹಿಂದೆ ರಾಜಕೀಯ ಪ್ರಚಾರ ಪಡೆಯುವ ಉದ್ದೇಶವಿದೆ. ಸ್ವತಃ ನೀರಾವರಿ ಸಚಿವರೂ ಆಗಿದ್ದ ಅವರು ಹೀಗೆ ನಡೆದುಕೊಳ್ಳುತ್ತಿರುವುದು ಅನುಚಿತ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಂಗ್ರೆಸ್ ನಾಯಕ ಹರಿಪ್ರಸಾದ್ ಅವರು ಸಣ್ಣಪುಟ್ಟ ಜಾತಿಗಳನ್ನು ಒಗ್ಗೂಡಿಸಲು ಮುಂದಾಗಿರುವುದರಲ್ಲಿ ತಪ್ಪಿಲ್ಲ. ಕುಂಬಾರ, ಕಮ್ಮಾರ, ಉಪ್ಪಾರ ತರಹದ ಅತಿಸಣ್ಣ ಜಾತಿಗಳಿಗೂ ಕಾಂಗ್ರೆಸ್ ಬೆಲೆ ಕೊಡುತ್ತದೆ. ಇಂತಹ ಸಮುದಾಯಕ್ಕೆ ಸೇರಿದ ವೀರಪ್ಪ ಮೊಯ್ಲಿಯವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿದ ಶ್ರೇಯಸ್ಸು ನಮ್ಮ ಪಕ್ಷದ್ದಾಗಿದೆ. ಆದರೆ ಹರಿಪ್ರಸಾದ್ ಅವರು ರಾಜ್ಯ ಸರಕಾರದ ವಿರುದ್ಧವೇ ಹೋರಾಡುತ್ತೇನೆ ಎಂದು ಹೇಳಿರುವುದು ನನಗೆ ಗೊತ್ತಿಲ್ಲ ಎಂದು ಎಂ.ಬಿ ಪಾಟೀಲ್ ಹೇಳಿದರು.