ʼಚಳಿಗಾಲದಲ್ಲಿ ಬಿಜೆಪಿ, ಬೇಸಿಗೆಗಾಲದಲ್ಲಿ ಜೆಡಿಎಸ್,ಮಳೆಗಾಲದಲ್ಲಿ ‌ಕಾಂಗ್ರೆಸ್ʼ: ಆಯನೂರು ಮಂಜುನಾಥ್ ವಿರುದ್ಧ ಶಿವಮೊಗ್ಗ ʼಕೈʼ ಮುಖಂಡರ ಟೀಕೆ

Update: 2023-08-20 07:16 GMT

ಶಿವಮೊಗ್ಗ, ಆ.20: ಚಳಿಗಾಲದಲ್ಲಿ ಬಿಜೆಪಿಯಲ್ಲಿದ್ದು, ಬೇಸಿಗೆಗಾಲದಲ್ಲಿ ಕಾಂಗ್ರೆಸ್ ಬಾಗಿಲು ತಟ್ಟಿ ,ಕಾಂಗ್ರೆಸ್ ಮುಚ್ಚಿದೆ ಅಂತ ಗೊತ್ತಾದ ಮೇಲೆ ಜೆಡಿಎಸ್ ಸೇರ್ಪಡೆಗೊಂಡ ಆಯನೂರು ಮಂಜುನಾಥ್​ರವರು, ಇದೀಗ ಮಳೆಗಾಲದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ. ಆಯನೂರು ಮಂಜುನಾಥ್ ಅವರು ಕಾಂಗ್ರೆಸ್ ಬಾಗಿಲು ತಟ್ಟಿರುವುದಕ್ಕೆ ನಮ್ಮ ಧಿಕ್ಕಾರವಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ,ಮಹಾ ನಗರ ಪಾಲಿಕೆ ಸದಸ್ಯ ಹೆಚ್.ಸಿ ಯೋಗೇಶ್  ಹೇಳಿದ್ದಾರೆ.

ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡ ಬಳಿ ಹೋಗಿ ನಾನು ಕಾಂಗ್ರೆಸ್ ಗೆ ಸೇರುತ್ತೇನೆ ಎನ್ನುತ್ತಿದ್ದಾರೆ.  ಆಯನೂರು ಮಂಜುನಾಥ್​  2023ರ ವಿಧಾನ ಸಭಾ ಚುನಾವಣೆಯಲ್ಲಿ ಕೇವಲ 5% ಮತ ಮಾತ್ರ ಅವರು ತೆಗೆದುಕೊಂಡಿದ್ದರು.  ಕೇವಲ 8863 ಮತ ತೆಗೆದುಕೊಂಡು ಠೇವಣಿನೂ ಪಡೆದುಕೊಳ್ಳದ ವ್ಯಕ್ತಿ ಕಾಂಗ್ರೆಸ್ ಗೆ ಬರುತ್ತೇನೆ ಅಂದಿದ್ದಾರೆ.  ನಾನೇ ಕಾಂಗ್ರೆಸ್ ನ ಎಲ್ಲಾ ಮುಖಂಡರಿಗೆ ಪತ್ರ ಬರೆದಿದ್ದೇನೆ.  ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬಾರದು ಎಂದು ಒತ್ತಾಯಿಸಿದ್ಧೇನೆ ಎಂದು ತಿಳಿಸಿದರು.

ನಮ್ಮ ರಾಜ್ಯ ನಾಯಕರ ಬಗ್ಗೆ ಏಕವಚನದಲ್ಲಿ ಮಾತನಾಡಿರುವ ವ್ಯಕ್ತಿ ಈಗ ಕಾಂಗ್ರೆಸ್ ಗೆ ಸೇರುತ್ತೇನೆ ಎನ್ನುತ್ತಿದ್ದಾರೆ.  ಸಿದ್ದರಾಮಯ್ಯನವರ ಬಗ್ಗೆ ಮಾತನಾಡಿ ಅವರ ಮನೆ ಬಾಗಿಲು ತಟ್ಟುತ್ತಿದ್ದಿರಾ.ನಿಮಗೆ ಧಮ್ ಇದ್ದರೆ ನೀವಿರುವ ಪಕ್ಷದಲ್ಲೇ ನಿಮ್ಮ ಧಮ್ ತೋರಿಸಿ ಎಂದು ಸವಾಲು ಹಾಕಿದರು.

ಅಧಿಕಾರದ ಆಸೆಗೆ ಕಾಂಗ್ರೆಸ್ ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ. ಯುವಕರಿಗೆ ನಿಮ್ಮ ಸಂದೇಶ ಏನು. ಪಕ್ಷದಿಂದ ಪಕ್ಷಕ್ಕೆ ಹಾರುವುದಾ ಎಂದು ಪ್ರಶ್ನಿಸಿದ್ದಾರೆ. 

ನೀವು ಗೆದ್ದಿರುವುದು ಪಧವೀಧರ ಕ್ಷೇತ್ರದಿಂದ ಆ ಯುವಕರಿಗೆ ನಿಮ್ಮ ಸಂದೇಶ ಏನು ಮರದಿಂದ ಮರಕ್ಕೆ ಹಾರುವುದು ಹೇಗೆ ಏನ್ನುವುದಾ ಎಂದು ಪ್ರಶ್ನಿಸಿದರು ಅವರು, ಜೆಡಿಎಸ್ ಸೇರ್ಪಡೆ ವೇಳೆ ಅವರ ಜೊತೆಗೆ ಹೋದ ಮಾಜಿ ಶಾಸಕ ಕೆ.ಬಿ ಪ್ರಸನ್ನ ಕುಮಾರ್ ಅವರನ್ನು ಬಿಟ್ಟು ಈಗ ಒಬ್ಬರೇ ಕಾಂಗ್ರೆಸ್ ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ ಎಂದು ಲೇವಡಿ ಮಾಡಿದರು. 

ಆಯನೂರು  ಮಂಜುನಾಥ್  ಹಾಗೂ ಈಶ್ವರಪ್ಪನವರ ನಡುವೆ ಗಲಾಟೆ ಯಾಕೇ ಅಂದರೆ ಗುದ್ದಲಿ ಪೂಜೆಗೆ ಕರೆಯುತ್ತಿಲ್ಲ ಅಂತ ಅಷ್ಟೇ ಹೊರತು ಅಭಿವೃದ್ಧಿ ವಿಚಾರವಾಗಿ ಅಲ್ಲ. ಬಿಜೆಪಿ ಅವರನ್ನು ಹೊರತು ಪಡಿಸಿ ಪದವೀಧರ ಕ್ಷೇತ್ರದಿಂದ ಕಾಂಗ್ರೆಸ್ ಗೆಲ್ಲಲ್ಲ ಎಂದಿದ್ದರು. ಈಗ ಕಾಂಗ್ರೆಸ್ ಬಂದ ತಕ್ಷಣ ನೀವು ಗೇಲ್ತೀರಾ ಎಂದು ಪ್ರಶ್ನಿಸಿದರು.

ಈಗಾಗಲೇ ನಮ್ಮ ಪಕ್ಷದ ಅಭ್ಯರ್ಥಿಗಳು ಕೆಪಿಸಿಸಿಗೆ ಪಧವೀದರರ ಕ್ಷೇತ್ರಕ್ಕೆ ಅಭ್ಯರ್ಥಿ ಬಯಸಿ ಅರ್ಜಿ ಹಾಕಿದ್ದಾರೆ. ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರ್ಪಡೆಗೆ ನಮ್ಮೆಲ್ಲರ ವಿರೋಧ ಇದೆ ಎಂದು ಹೇಳಿದರು.

ಆಯನೂರು ಮಂಜುನಾಥ್ ಸೇರಿಸಿಕೊಳ್ಳುವ ಮುನ್ನ ರಾಜ್ಯ ಹಾಗೂ ಕೇಂದ್ರ ನಾಯಕರು ಯೋಚನೆ ಮಾಡಲಿ. ಇವರ ಸೇರ್ಪಡೆಯಿಂದ ಲೋಕಸಭಾ ಚುನಾವಣೆಯಲ್ಲಿ ನಮಗೇನು ಪ್ರಯೋಜನ ಆಗಲ್ಲ.  ನಮ್ಮ ನಾಯಕರ ಬಗ್ಗೆ ಏಕವಚನದಲ್ಲೇ ಮಾತನಾಡಿರುವ ವಿಡಿಯೋ ಕ್ಲಿಪ್ ಗಳನ್ನು ನಮ್ಮ ಹೈಕಮಾಂಡ್ ಗೆ ಕಳಿಸಿಕೊಡಲಾಗಿದೆ. ಪಕ್ಷದಲ್ಲಿ ದುಡಿದವರಿಗೆ ಪಕ್ಷ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಇರೋ ಪಕ್ಷದಲ್ಲೇ ಇದ್ದು ಆಯನೂರು ಮಂಜುನಾಥ್ ಆ ಪಕ್ಷ ಉದ್ದಾರ ಮಾಡಬೇಕು. ನಾವೇ ಕಾಂಗ್ರೆಸ್ ಪಕ್ಷವನ್ನು ಕಟ್ಟುತ್ತೇವೆ.ನಮ್ಮ ಮೇಲೆ ಹೈಕಮಾಂಡ್ ನಂಬಿಕೆ ಇಡಬೇಕು. ಹೈಕಮಾಂಡ್ ಸೂಚಿಸಿದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಮುಖಂಡರಾದ ವಿಶ್ವನಾಥ್ ಕಾಶಿ,ಶಾಮಿರ್ ಖಾನ್ ,ರಂಗೇಗೌಡ ಸೇರಿದಂತೆ ಹಲವರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News