ಬಿಜೆಪಿ ಒಂದು ಕೋಮುವಾದಿ ಪಕ್ಷ: ಸ್ವಪಕ್ಷದ ವಿರುದ್ಧವೇ ಸಂಸದ ಬಿ.ಎನ್. ಬಚ್ಚೇಗೌಡ ವಾಗ್ದಾಳಿ
ಚಿಕ್ಕಬಳ್ಳಾಪುರ: 'ಬಿಜೆಪಿ ಒಂದು ಮತೀಯ ಮತ್ತು ಕೋಮುವಾದಿ ಪಕ್ಷ' ಎಂದು ಬಿಜೆಪಿ ಸಂಸದ ಬಿ.ಎನ್. ಬಚ್ಚೇಗೌಡ ಸ್ವಪಕ್ಷದ ವಿರುದ್ಧವೇ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನದಲ್ಲಿ ನಡೆದ ದಿಶಾ ಸಭೆಯಲ್ಲಿ ಅವರು ಮಾತಾಡಿದರು.
ʼʼರಾಜ್ಯದ ಬಿಜೆಪಿಯಲ್ಲಿ ದೊಡ್ಡ ಮಟ್ಟದ ನಾಯಕರು ಇದ್ದಾರೆ. ಆದರೂ ವಿಧಾನಸಭೆ ಪ್ರತಿಪಕ್ಷದ ನಾಯಕ ಮತ್ತು ರಾಜ್ಯ ಘಟಕದ ಅಧ್ಯಕ್ಷರ ನೇಮಕವಾಗಿಲ್ಲ. ಜೆಡಿಎಸ್ ಮತ್ತು ಬಿಜೆಪಿ ಒಂದಾಗುವ ಕಾರಣದಿಂದಾಗಿಯೇ ಹೈಕಮಾಂಡ್ ಆಯ್ಕೆಗೆ ತಡ ಮಾಡಿದ್ದಾರೆ. ಈ ಒಂದಾಗುವ ತೀರ್ಮಾನದ ಮೇಲೆ ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ ಎಂದು ನನಗೆ ಅನ್ನಿಸುತ್ತಿದೆʼʼ ಎಂದು ಹೇಳಿದರು.
''ದೇವೇಗೌಡರು ಇರುವವರೆಗೂ ಬಿಜೆಪಿ ಜೊತೆ ಜೆಡಿಎಸ್ ಹೋಗುವುದಿಲ್ಲ ಎಂದುಕೊಂಡಿದ್ದೆ. ಜಾತ್ಯತೀತ ಎನಿಕೊಂಡಿರುವ ಜೆಡಿಎಸ್ ಕೋಮುವಾದಿ ಬಿಜೆಪಿ ಜೊತೆ ಹೋಗುವುದು ಅಚ್ಚರಿ ಮೂಡಿಸಿದೆ'' ಎಂದು ಅವರು ಹೇಳಿದರು.
ಬಚ್ಚೇಗೌಡ ಅವರು ಇತ್ತೀಚಿಗಷ್ಟೇ ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳಿದ್ದರು.