ಬಿಜೆಪಿ-ಜೆಡಿಎಸ್ ಮೈತ್ರಿ; ನಡು ನೀರಲ್ಲಿ ಮುಳುಗುತ್ತಿರುವವರು ಪರಸ್ಪರ ಸಹಾಯ ಪಡೆದಂತೆ: ಕಾಂಗ್ರೆಸ್ ವ್ಯಂಗ್ಯ
ಬೆಂಗಳೂರು: ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಕಾಂಗ್ರೆಸ್ ವ್ಯಂಗ್ಯವಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ-ಜೆಡಿಎಸ್ ಮೈತ್ರಿ ಹೇಗಿದೆ ಅಂದರೆ ನಡು ನೀರಲ್ಲಿ ಮುಳುಗುತ್ತಿರುವ ಇಬ್ಬರು ಒಬ್ಬರನೊಬ್ಬರು ಕೈ ಹಿಡಿದು ಆಸರೆ ಪಡೆಯುವಂತೆ. ಪರಸ್ಪರ ಕೈ ಹಿಡಿದು ಇಬ್ಬರೂ ಮುಳುಗಿ ತಳ ಸೇರುವುದು ಖಂಡಿತ. ಮುಳುಗುವವರು ಹುಲ್ಲು ಕಡ್ಡಿಯ ಆಸರೆಯನ್ನಾದರೂ ಪಡೆಯಬೇಕು, ಅದು ಬಿಟ್ಟು ಮತ್ತೊಬ್ಬ ಮುಳುಗುತ್ತಿರುವವರ ಆಸರೆ ಪಡೆದರೆ ಬದುಕಲು ಸಾಧ್ಯವೇ? ಎಂದು ಪ್ರಶ್ನಿಸಿದೆ.
ಹೆಚ್ ಡಿ ಕೆ ಅವರು ಚುನಾವಣೆಯಲ್ಲಿ ಸೋತರೆ ಪಕ್ಷ ವಿಸರ್ಜಿಸುತ್ತೇನೆ ಎಂದಿದ್ದರು. ಆದರೆ ಈಗ "ಜಾತ್ಯಾತೀತತೆ"ಯನ್ನು ವಿಸರ್ಜಿಸಲು ಹೊರಟಿದ್ದಾರೆ. ಜನತಾ ದಳ ಎಂಬ ಹೆಸರನ್ನು "ಕಮಲ ದಳ" ಎಂದು ಬದಲಿಸಿಕೊಂಡರೆ ಒಳಿತು ಎಂದು ಹೇಳಿದೆ.
ಇತ್ತ ರಾಜ್ಯ ಬಿಜೆಪಿಯು ಜೆಡಿಎಸ್ ಪಕ್ಷವನ್ನು ಫ್ಯಾಮಿಲಿ ಪಾರ್ಟಿ ಎಂದು ಟೀಕಿಸುತ್ತಿತ್ತು. ಈಗ ಅದೇ ಫ್ಯಾಮಿಲಿಗೆ ನಾಲ್ಕು ಸೀಟು ಬಿಟ್ಟು ಹೊಂದಾಣಿಕೆ ಮಾಡಿಕೊಳ್ಳುತ್ತಿರುವುದು ನಾಚಿಕೆಗೇಡು ಅಲ್ಲವೇ ಎಂದು ಪ್ರಶ್ನಿಸಿದೆ.
ಬಿಜೆಪಿ ಆಡಳಿತದ ಅವಧಿಯಲ್ಲಿ ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ನೀಡುವ ಶುಚಿ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು. ನಮ್ಮ ಸರ್ಕಾರ ಎಲ್ಲಾ ಜನಪರ ಕಾರ್ಯಕ್ರಮಗಳಿಗೆ ಮರುಜೀವ ನೀಡಲು ಮುಂದಾಗಿದೆ. ಪದವಿಪೂರ್ವ ವಿದ್ಯಾರ್ಥಿನೀಯರಿಗೆ ಋತುಸ್ರಾವ ಕಪ್ ವಿತರಿಸುವ “ನನ್ನ ಮೈತ್ರಿ“ ಯೋಜನೆಗೆ ಚಾಲನೆ ನೀಡಲು ನಮ್ಮ ಸರ್ಕಾರ ಸಜ್ಜಾಗಿದೆ. ಜನರಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ಜನಸ್ನೇಹಿ ಯೋಜನೆಗಳು ಬರುತ್ತವೆ ಎಂಬ ವಿಶ್ವಾಸ ಮೂಡುತ್ತಿದೆ ಎಂದು ಹೇಳಿದೆ.