ಸರಕಾರ ಅಭದ್ರಗೊಳಿಸುವ ಬಿಜೆಪಿ-ಜೆಡಿಎಸ್ ಪ್ರಯತ್ನಕ್ಕೆ ಸೋಲು ಖಚಿತ : ಸಿಎಂ ಸಿದ್ದರಾಮಯ್ಯ

Update: 2024-09-24 13:32 GMT

ಬೆಂಗಳೂರು : ಕಾಂಗ್ರೆಸ್ ಸರಕಾರವನ್ನು ಅಭದ್ರಗೊಳಿಸಿ, ಹಾಗೂ ನನಗೆ ಕಪ್ಪು ಮಸಿ ಬಳಿಯಲು ಬಿಜೆಪಿ ಜೆಡಿಎಸ್ ನಡೆಸುತ್ತಿರುವ ಪ್ರಯತ್ನಕ್ಕೆ ಸೋಲು ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮಂಗಳವಾರ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಆದೇಶ ಹೊರಬಂದ ನಂತರ ಪತ್ರಿಕಾಗೋಷ್ಠಿ ನಡೆಸಿ, ತಮ್ಮ ಮೊದಲ ಪ್ರತಿಕ್ರಿಯೆ ನೀಡಿದರು.

"ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಎನ್‌ಎಸ್‌ಎಸ್ ಪ್ರಕಾರ 218 ಹಾಗೂ ಪಿಸಿ ಕಾಯ್ದೆ19ರಂತೆ ತನಿಖೆಗೆ ಅನುಮತಿ ನೀಡುವುದನ್ನು ತಿರಸ್ಕರಿಸಿ, ಪಿಸಿ ಕಾಯ್ದೆಯ 17ಎ ಪ್ರಕಾರ ತನಿಖೆಗೆ ಉಚ್ಛನ್ಯಾಯಾಲಯ ಆದೇಶ ನೀಡಿದೆ. ಈ ತೀರ್ಪಿನ ಮೇಲೆ ಕಾನೂನು ಹೋರಾಟದ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚೆ ಮಾಡಿ , ಮುಂದಿನ ಕ್ರಮದ ಬಗ್ಗೆ ತೀರ್ಮಾನ ಮಾಡಲಾಗುವುದು" ಎಂದರು.

ಬಿಜೆಪಿ-ಜೆಡಿಎಸ್‌ನ ಪಿತೂರಿಗೆ ಹೆದರುವುದಿಲ್ಲ :

ಬಿಜೆಪಿ-ಜೆಡಿಎಸ್‌ನ ಪಿತೂರಿಗೆ ನಾನು ಎಂದೂ ಹೆದರುವುದಿಲ್ಲ. ಬಿಜೆಪಿ ಜೆಡಿಎಸ್ ಸಂಚು , ರಾಜಭವನ ದುರುಪಯೋಗ ಹಾಗೂ ದುರ್ಬಳಕೆಗೆ ನಾನು ಹೆದರುವುದಿಲ್ಲ. ರಾಜ್ಯದ ಜನ, ಪಕ್ಷದ ಹೈಕಮಾಂಡ್, ಶಾಸಕರು, ಸಚಿವರು, ಕಾರ್ಯಕರ್ತರು ನನ್ನೊಂದಿಗಿದ್ದಾರೆ. ಕಾನೂನು ಹೋರಾಟಕ್ಕೆ ಹೈಕಮಾಂಡ್ ಸಹಕಾರ ನೀಡಲಿದೆ. ನರೆಂದ್ರ ಮೋದಿಯವರ ಬಿಜೆಪಿ ಸರಕಾರ, ಕೇವಲ ನನ್ನ ಮೇಲಷ್ಟೇ ಅಲ್ಲ , ಇಡೀ ದೇಶದ ವಿರೋಧಪಕ್ಷಗಳ ವಿರುದ್ಧ ಸೇಡಿನ ರಾಜಕೀಯ ಮಾಡುತ್ತಿದ್ದಾರೆ ಎಂದರು.

ಆಪರೇಷನ್ ಕಮಲದ ಪ್ರಯತ್ನ ವಿಫಲ :

ಬಿಜೆಪಿ ಹಾಗೂ ಜೆಡಿಎಸ್‌ನವರು ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬಂದಿಲ್ಲ. ವಿಧಾನಸಭೆ ಚುನಾವಣೆಯಲ್ಲಿಯೂ ಸೋತಿದ್ದಾರೆ. ಅವರು ಹಣಬಲದಿಂದ, ಆಪರೇಷನ್ ಕಮಲ ಮಾಡಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದರೇ ಹೊರತು, ಜನರ ಆಶೀರ್ವಾದದೊಂದಿಗೆ ಎಂದಿಗೂ ಬಿಜೆಪಿ-ಜೆಡಿಎಸ್ ಅಧಿಕಾರಕ್ಕೆ ಬಂದಿಲ್ಲ. ವಿಧಾನಸಭಾ ಚುನಾವಣೆಯಲ್ಲಿ 136 ಸ್ಥಾನ ಗೆದ್ದಿರುವ ಕಾಂಗ್ರೆಸ್ ಪಕ್ಷ ಬಂದಿದ್ದರಿಂದ ಆಪರೇಷನ್ ಕಮಲ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ದುಡ್ಡನ್ನು ಕೊಟ್ಟು ಶಾಸಕರನ್ನು ಖರೀದಿಸುವ ಪ್ರಯತ್ನ ಮಾಡಿದ್ದರು. ನಮ್ಮ ಯಾವ ಶಾಸಕರೂ ದುಡ್ಡಿನ ಹಿಂದೆ ಹೋಗದ ಕಾರಣ, ಅವರ ಪ್ರಯತ್ನ ವಿಫಲವಾಯಿತು ಎಂದು ತಿಳಿಸಿದರು.

ಬಿಜೆಪಿಯವರು ಸಾಮಾಜಿಕ ನ್ಯಾಯ, ಬಡವರ ವಿರೋಧಿಗಳು :

ಕಾಂಗ್ರೆಸ್ ಸರಕಾರದ ಬಡವರ ಪರ ಕಾರ್ಯಕ್ರಮಗಳನ್ನು ಬಿಜೆಪಿ ವಿರೋಧಿಸುತ್ತಾ ಬಂದಿದ್ದಾರೆ. ಶೂಭಾಗ್ಯ, ಪಶುಭಾಗ್ಯ, ಶಾದಿಭಾಗ್ಯ , ಕ್ಷೀರಭಾಗ್ಯ ಸೇರಿದಂತೆ ಹಲವು ಜನಪರ ಯೋಜನೆಗಳು ಹಾಗೂ ಈಗಿನ ಗ್ಯಾರಂಟಿ ಯೋಜನೆಗಳನ್ನು ಸಹ ವಿರೋಧಿಸುತ್ತಿದ್ದಾರೆ. ಬಿಜೆಪಿಯವರು ಸಾಮಾಜಿಕ ನ್ಯಾಯ, ಬಡವರ ವಿರೋಧಿಗಳು. ಸರಕಾರಕ್ಕೆ ಕಪ್ಪು ಮಸಿ ಬಳಿಯುವುದು ಅವರ ದುರಾಲೋಚನೆ. ಹೈಕೋರ್ಟ್ ಆದೇಶದ ಪ್ರತಿಯನ್ನು ಸಂಪೂರ್ಣ ಪರಿಶೀಲಿಸಿ, ಮುಂದಿನ ಪ್ರತಿಕ್ರಿಯೆಯನ್ನು ನೀಡುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು, ಇಡೀ ದೇಶದಲ್ಲಿ ಪಿತೂರಿ ಮಾಡಿದಂತೆ ಕರ್ನಾಟಕದಲ್ಲಿಯೂ ನನ್ನ ಹಾಗೂ ಸರಕಾರದ ವಿರುದ್ಧ ಪಿತೂರಿ ಮಾಡಲಾಗಿದೆ ಎಂದರು.

Full View

ತಪ್ಪು ಮಾಡಿಲ್ಲ : ನನ್ನ ಪ್ರಕಾರ ನಾನು ತಪ್ಪು ಮಾಡಿಲ್ಲ. 17 ಎ ಅಡಿ ತನಿಖೆ ಮಾಡಲು ಆದೇಶ ನೀಡಿದ ಮಾತ್ರಕ್ಕೆ ನಾನು ತಪ್ಪು ಮಾಡಿದ್ದೇನೆ ಎಂದಲ್ಲ. ಬಿ.ಎನ್.ಎಸ್.ಎಸ್ ಕಾಯ್ದೆಯಡಿ 218 ಆದೇಶ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News