ಬಿಜೆಪಿ-ಜೆಡಿಎಸ್ ಮಾಡುತ್ತಿರುವುದು ‘ಪಾಪ ವಿಮೋಚನಾ ಯಾತ್ರೆ’: ಡಿ.ಕೆ.ಶಿವಕುಮಾರ್ ವ್ಯಂಗ್ಯ

Update: 2024-08-04 14:37 GMT

Photo:X/@DKShivakumar

ಬೆಂಗಳೂರು: ಬೆಂಗಳೂರಿನಿಂದ ಮೈಸೂರುವರೆಗೆ ಬಿಜೆಪಿ ಹಾಗೂ ಜೆಡಿಎಸ್ ಮಾಡುತ್ತಿರುವುದು ಪಾಪ ವಿಮೋಚನಾ ಪಾದಯಾತ್ರೆ ಅಷ್ಟೇ. ಇದಕ್ಕೆ ಹೆಚ್ಚಿನ ಮಹತ್ವ ನೀಡುವುದು ಅಗತ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ರವಿವಾರ ಚನ್ನಪಟ್ಟಣದಲ್ಲಿ ಬಿಜೆಪಿ-ಜೆಡಿಎಸ್ ಪಾದಯಾತ್ರೆ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿದ್ದ ಜನಾಂದೋಲನ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ಮಾಡಿರುವ ಎಲ್ಲ ಪಾಪಗಳನ್ನು ಕಳೆದುಕೊಳ್ಳಲು ಈ ಪಾದಯಾತ್ರೆ ಮಾಡುತ್ತಿದ್ದಾರೆ. ಇದು ಭ್ರಷ್ಟಾಚಾರದಿಂದ ಭ್ರಷ್ಟಾಚಾರಕ್ಕೋಸ್ಕರ, ಭ್ರಷ್ಟಾಚಾರಿಗಳೇ ನಡೆಸುತ್ತಿರುವ ಪಾದಯಾತ್ರೆ ಎಂದು ವಾಗ್ದಾಳಿ ನಡೆಸಿದರು.

ಕುಮಾರಸ್ವಾಮಿ ಅವರ ಅಕ್ರಮಗಳ ಬಗ್ಗೆ ಬಿಜೆಪಿಯವರು ಮಾಧ್ಯಮಗಳಲ್ಲಿ ಪ್ರಕಟಿಸಿದ್ದ ಜಾಹೀರಾತಿನ ಬಗ್ಗೆ ಪಾದಯಾತ್ರೆ ಮಾಡುತ್ತಿರುವವರು ಉತ್ತರ ಕೊಡಬೇಕು. ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ಅವರ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ಅವರ ಪ್ರಶ್ನೆಗಳಿಗೆ ಉತ್ತರ ನೀಡಿ ಎಂದು ನಾವೆಲ್ಲರೂ ಆಗ್ರಹಿಸುತ್ತಿದ್ದೇವೆ ಎಂದು ತಿಳಿಸಿದರು.

ಬಿಜೆಪಿ ಅವಧಿಯಲ್ಲಿ 25 ಹಗರಣಗಳಿವೆ. ನಮ್ಮ ಸಚಿವರು ನಿಮ್ಮ ಅವಧಿಯಲ್ಲಿ ಆಗಿರುವ ಹಗರಣದ ಬಗ್ಗೆ ಕೇಳಿರುವ ಪ್ರಶ್ನೆಗೆ ಉತ್ತರಿಸಿ. ಕಿಯೋನಿಕ್ಸ್ ಹಾಗೂ ಪಂಚಾಯಿತಿಗಳಲ್ಲಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದರಲ್ಲಾ ಅದೆಲ್ಲವನ್ನು ಹೊರಗೆ ತೆಗೆಯಬೇಕು. ನಿಮ್ಮ ಅವಧಿಯಲ್ಲಿ ನಡೆದ ಪಿಎಸ್ಸೈ ಹಗರಣ ನಡೆದಾಗ ಸಿಎಂ ಹಾಗೂ ಗೃಹ ಸಚಿವರು ಯಾಕೆ ರಾಜೀನಾಮೆ ನೀಡಲಿಲ್ಲ? ಹಗರಣವೇ ಇಲ್ಲದ ಪ್ರಕರಣದಲ್ಲಿ ಮುಖ್ಯಮಂತ್ರಿಗಳಿಂದ ರಾಜೀನಾಮೆ ಕೇಳುತ್ತಿದ್ದೀರಿ. ಭೋವಿ ನಿಗಮ, ದೇವರಾಜ ಅರಸು ಟ್ರಕ್ ಟರ್ಮಿನಲ್ ಹಗರಣ ನಡೆದಾಗ ನಿಮ್ಮ ಮುಖ್ಯಮಂತ್ರಿಗಳು, ಮಂತ್ರಿಗಳು ಯಾಕೆ ರಾಜೀನಾಮೆ ನೀಡಲಿಲ್ಲ ಎಂದು ಅವರು ಪ್ರಶ್ನಿಸಿದರು.

ನಿಮ್ಮ ಸರಕಾರದ ಅಕ್ರಮಗಳ ಬಗ್ಗೆ ನಾವು ಮಾತನಾಡಿರುವುದಕ್ಕಿಂತ ನಿಮ್ಮ ಪಕ್ಷದ ನಾಯಕರಾದ ಗೂಳಿಹಟ್ಟಿ ಶೇಖರ್, ಬಸನಗೌಡ ಪಾಟೀಲ್ ಯತ್ನಾಳ್, ಎಚ್. ವಿಶ್ವನಾಥ್ ಅವರು, ನಿಮ್ಮ ಸ್ನೇಹಿತರಾದ ಕುಮಾರಸ್ವಾಮಿ ಮಾಡಿರುವ ಆರೋಪಗಳ ಬಗ್ಗೆ ಉತ್ತರ ನೀಡಿ. ಕುಮಾರಸ್ವಾಮಿ, ಯಡಿಯೂರಪ್ಪ, ಬಿಜೆಪಿ ನಾಯಕರಾದ ಮೋದಿ ವಿರುದ್ಧ ಏನೆಲ್ಲಾ ಮಾತನಾಡಿದ್ದಾರೆ ತಿಳಿದಿದೆಯೇ ಎಂದರು.

ಚನ್ನಪಟ್ಟಣದ ಜನರಿಗೆ ಒಂದು ಮಾತು ಹೇಳುತ್ತೇನೆ. ಮುಂಬರುವ ಚುನಾವಣೆಯಲ್ಲಿ ಪಕ್ಷದಿಂದ ಯಾರೇ ಅಭ್ಯರ್ಥಿ ಆಗಬಹುದು. ಆದರೂ ಇಲ್ಲಿ ನಿಜವಾದ ಅಭ್ಯರ್ಥಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್. ಇಲ್ಲಿ ಹಸ್ತದ ಗುರುತೇ ಅಭ್ಯರ್ಥಿ. ನಾನು ಇಲ್ಲಿನ ಶಾಸಕನಂತೆ ಕೆಲಸ ಮಾಡುತ್ತೇನೆ. ಇದಕ್ಕೆ ನೀವು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ವಸತಿ ಸಚಿವ ಝಮೀರ್ ಅಹ್ಮದ್ ಅವರು ಈ ಕ್ಷೇತ್ರಕ್ಕೆ 5 ಸಾವಿರ ಮನೆ ಮಂಜೂರು ಮಾಡುವುದಾಗಿ ಹೇಳಿದ್ದಾರೆ. ಬಡವವರಿಗೆ ನಿವೇಶನ ನೀಡಲು ಜಾಗ ಗುರುತಿಸುತ್ತಿದ್ದೇವೆ. ಬಡವರಿಗೆ ನಿವೇಶನ ನೀಡುತ್ತಿದ್ದಾರೆ. ಈ ಕ್ಷೇತ್ರದ ಅಭಿವೃದ್ಧಿಗೆ 100 ಕೋಟಿ ನೀಡಲು ಮುಖ್ಯಮಂತ್ರಿಗಳು ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಅರ್ಹರಿಗೆ ಬಗರ್ ಹುಕ್ಕುಂ ಜಮೀನು ನೀಡಲಾಗುವುದು. ಲೋಕಸಭೆ ಚುನಾವಣೆಯಲ್ಲಿ ಸುರೇಶ್ ಸೋತಿರಬಹುದು. ಆದರೆ ನೀವು ನಮಗೆ 80 ಸಾವಿರ ಮತ ಹಾಕಿದ್ದೀರಿ. ನಿಮ್ಮನ್ನು ಬಿಡುವ ಪ್ರಶ್ನೆ ಇಲ್ಲ. ನಿಮ್ಮ ಕೈಯನ್ನು ನಾವು ಹಿಡಿಯುತ್ತೇವೆ ಎಂದು ಅವರು ಭರವಸೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News