ರೈತರಿಗೆ 669 ಕೋಟಿ ರೂ. ಹಾಲಿನ ಪ್ರೋತ್ಸಾಹ ಧನ ಬಾಕಿ ಉಳಿಸಿದ್ದ ಬಿಜೆಪಿ: ಕಾಂಗ್ರೆಸ್ ಆರೋಪ

Update: 2024-05-23 15:06 GMT

ಬೆಂಗಳೂರು: ತನ್ನ ಆಡಳಿತದಲ್ಲಿ ವರ್ಷಗಟ್ಟಲೆ ರೈತರಿಗೆ ಹಾಲಿನ ಪ್ರೋತ್ಸಾಹಧನವನ್ನು ಕೊಡದ ಬಿಜೆಪಿ ಅಧಿಕಾರದಿಂದ ನಿರ್ಗಮಿಸುವಾಗ 669 ಕೋಟಿ ರೂ. ಪ್ರೋತ್ಸಾಹ ಧನವನ್ನು ಬಾಕಿ ಉಳಿಸಿ ಹೋಗಿತ್ತು ಎಂದು ಕಾಂಗ್ರೆಸ್ ಆರೋಪಿಸಿದೆ.

ರಾಜ್ಯದ ರೈತರಿಗೆ ಕಳೆದ ಎಂಟು ತಿಂಗಳಿನಿಂದ ಹಾಲಿನ ಪ್ರೋತ್ಸಾಹ ಧನ ಸಿಗುತ್ತಿಲ್ಲ ಎಂದು ಮಾಧ್ಯಮದಲ್ಲಿ ಪ್ರಕಟವಾಗಿರುವ ವರದಿಯನ್ನು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

ರೈತರಿಗೆ 669 ಕೋಟಿ ರೂ. ಕೊಡದೆ ಕೈ ಎತ್ತಿದ್ದೇಕೆ ರಾಜ್ಯ ಬಿಜೆಪಿ? ರೈತರಿಂದ ಕಮಿಷನ್ ಸಿಗುವುದಿಲ್ಲ ಎಂಬುದಕ್ಕಾಗಿಯೇ? ನಮ್ಮ ಸರಕಾರ ಸಾಮಾನ್ಯ ವರ್ಗದ ರೈತರಿಗೆ 2023-24ನೇ ಸಾಲಿನ ಪ್ರೋತ್ಸಾಹ ಧನವನ್ನು ಕಳೆದ ಸಾಲಿನ ಆಗಸ್ಟ್‍ವರೆಗೆ ಪಾವತಿ ಮಾಡಿದೆ, ಪರಿಶಿಷ್ಟ ಜಾತಿ/ಪಂಗಡದ ಹಾಲು ಉತ್ಪಾದಕ ರೈತರಿಗೆ 2024ರ ಫೆಬ್ರವರಿವರೆಗಿನ ಪ್ರೋತ್ಸಾಹ ಧನವನ್ನು ಪಾವತಿ ಮಾಡಲಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.

ಸೆಪ್ಟೆಂಬರ್ ನಿಂದ ಬಾಕಿ ಇರುವ ಸಾಮಾನ್ಯ ವರ್ಗದ ರೈತರ ಪ್ರೋತ್ಸಾಹ ಧನವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ನಮ್ಮ ಸರಕಾರ. ರೈತರ ನೆರವಿಗೆ ನಮ್ಮ ಸರಕಾರ ಸದಾ ಮುಂದಿರುತ್ತದೆ. ಆದರೆ, ಬಿಜೆಪಿ ತನ್ನ ಆಡಳಿತದಲ್ಲಿ ರೈತರಿಗೆ ಕಾಲುಬಾಯಿ ಹಾಗೂ ಚರ್ಮಗಂಟು ರೋಗದ ಲಸಿಕೆ ನೀಡದೆ ರೈತರ ‘ದನ’ವನ್ನು ಕಿತ್ತುಕೊಂಡಿತ್ತು, ಪ್ರೋತ್ಸಾಹ ಧನ ನೀಡದೆ ರೈತರಿಗೆ ‘ಧನ’ವನ್ನು ವಂಚಿಸಿತ್ತು. ಈ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಲಿ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News