ವಿಪಕ್ಷ ನಾಯಕನನ್ನು ಚೀಟಿ ಮೂಲಕವಾದರೂ ಬಿಜೆಪಿ ಆಯ್ಕೆ ಮಾಡಬೇಕು: ವ್ಯಂಗ್ಯವಾಡಿದ ಜಗದೀಶ್ ಶೆಟ್ಟರ್

Update: 2023-09-03 14:49 GMT

ಜಗದೀಶ್ ಶೆಟ್ಟರ್

ಗದಗ: ‘ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದ್ದು, ಆ ಪಕ್ಷವೂ ಇದೀಗ ಲೀಡರ್ ಲೆಸ್ ಪಾರ್ಟಿ ಆಗಿದೆ’ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ರಾಮದುರ್ಗ ಕ್ಷೇತ್ರದಲ್ಲಿ ಹಣ ಇದ್ದ ವ್ಯಕ್ತಿಗೆ ಬಿಜೆಪಿ ಟಿಕೆಟ್ ಕೊಟ್ಟರು. ಬೈಂದೂರು ಕ್ಷೇತ್ರದಲ್ಲಿ ಸುಕುಮಾರ್ ಶೆಟ್ಟಿಗೆ ಟಿಕೆಟ್ ತಪ್ಪಿಸಿದರು. ಬಿಜೆಪಿಯ ಮಾಜಿ ಶಾಸಕರು, ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ. ಕಾಂಗ್ರೆಸ್ ಪಕ್ಷ ಸೇರಲು ಬಹಳಷ್ಟು ಜನ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ’ ಎಂದು ನುಡಿದರು.

‘ಯಾರು ಪಕ್ಷಕ್ಕೆ ಸೇರುತ್ತಾರೆಂದು ಹೇಳುವುದಿಲ್ಲ, ನಿರ್ಧಾರ ಆದ ಬಳಿಕ ಹೆಸರು ಹೇಳುತ್ತೇನೆ. ಮಾಜಿ ಸಚಿವ ಬಿ.ಸಿ.ಪಾಟೀಲ್ ಸಂಪರ್ಕದಲ್ಲಿಲ್ಲ’ ಎಂದ ಅವರು, ‘ಯಾವ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಬಿ.ಎಲ್.ಸಂತೋಷ್ ಅವರೇ ಸ್ಪಷ್ಟೀಕರಣ ಕೊಡಬೇಕು. ಬಿಜೆಪಿಯಲ್ಲಿ ವಿಪಕ್ಷ ನಾಯಕನನ್ನು ಚೀಟಿ ಮೂಲಕವಾದರೂ ತಾತ್ಕಾಲಿಕ ಆಯ್ಕೆ ಮಾಡಬೇಕು’ ಎಂದು ಲೇವಡಿ ಮಾಡಿದರು.

‘ರಾಜ್ಯದಲ್ಲಿ ಸರಕಾರ ರಚಿಸಿ 100 ದಿನವಾದರೂ ವಿಪಕ್ಷ ನಾಯಕ ಆಯ್ಕೆಯಾಗಿಲ್ಲ. ಬಿಜೆಪಿ ಇಂತಹ ಶೋಚನೀಯ ಪರಿಸ್ಥಿತಿಯಲ್ಲಿದೆ ಎನ್ನುವುದನ್ನು ರಾಜ್ಯದ ಜನತೆ ಅರ್ಥಮಾಡಿಕೊಳ್ಳಬೇಕು. ಬಿಜೆಪಿ ಕೆಲವರ ಮುಷ್ಟಿಯಲ್ಲಿದೆ, ಹೀಗಾಗಿ ಸುಧಾರಣೆಯಾಗಿಲ್ಲ ಎಂದ ಅವರು, ಲೋಕಸಭೆ ಚುನಾವಣೆಗೆ ಯಾರು ನಿಲ್ಲಬೇಕು ಎಂಬುದನ್ನು ನಮ್ಮ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News